ಕೊಪ್ಪಳ: ಮಳೆ ಉತ್ತಮವಾದ ಹಿನ್ನೆಲೆ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳು ಭರದಿಂದ ಸಾಗಿದೆ. ಆದರೆ, ರೈತರಿಗೆ ಸಮಯಕ್ಕೆ ಸರಿಯಾಗಿ ಯೂರಿಯಾ ಗೊಬ್ಬರ ಸಿಗದೇ ಪರದಾಡುವಂತಾಗಿದೆ. ಜಿಲ್ಲೆಯ ಯಲಬುರ್ಗಾ ತಾಲೂಕಿನ ಸುತ್ತಮುತ್ತಲ ಗ್ರಾಮದ ರೈತರು ಯೂರಿಯಾ ಗೊಬ್ಬರಕ್ಕಾಗಿ ಸರತಿ ಸಾಲಿನಲ್ಲಿ ನಿಂತು ಕಾಯುವಂತಾಗಿದೆ.
ಕೃಷಿ ಸಚಿವ ಬಿ.ಸಿ ಪಾಟೀಲ ಅವರು ಮುಂಗಾರು ಬಿತ್ತನೆಗಾಗಿ ರೈತರಿಗೆ ಗೊಬ್ಬರ ಮತ್ತು ಬಿತ್ತನೆ ಬೀಜದ ಕೊರತೆ ಆಗದಂತೆ ಕ್ರಮ ವಹಿಸಿದ್ದೇವೆ ಎಂದಿದ್ದಾರೆ. ಆದರೆ, ವಾಸ್ತವವೇ ಬೇರೆ. ಯಲಬುರ್ಗಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮುಂದೆ ಬೆಳಗ್ಗೆ 5 ಗಂಟೆಯಿಂದಲೇ ವಿವಿಧ ಗ್ರಾಮಗಳ ರೈತರು, ಮಹಿಳೆಯರು, ಮಕ್ಕಳು ಯೂರಿಯಾ ಗೊಬ್ಬರಕ್ಕಾಗಿ ಕಾದು ನಿಲ್ಲುವಂತಾಗಿದೆ. ಸೂಕ್ತ ಸಮಯಕ್ಕೆ ಗೊಬ್ಬರ ಸಿಗುತ್ತಿಲ್ಲವೆಂದು ರೈತರು ತಮ್ಮ ಅಳಲು ತೋಡಿಕೊಂಡಿದ್ದಾರೆ.
ಇದನ್ನೂ ಓದಿ: ಒಂದು ವರ್ಷ ಪೂರೈಸುವತ್ತ ಬೊಮ್ಮಾಯಿ ಸರ್ಕಾರ: ಬಿಜೆಪಿಯಲ್ಲಿ 15 ನಾಯಕರ ಚಿತ್ತ ಸಿಎಂ ಕುರ್ಚಿಯತ್ತ!
ಸದ್ಯ ಈ ಭಾಗದಲ್ಲಿ ಮೆಕ್ಕೆಜೋಳ, ಶೇಂಗಾ ಸೇರಿದಂತೆ ವಿವಿಧ ಬೆಳೆ ಬೆಳೆಯುತ್ತಿದ್ದು, ಬೆಳೆಗಳಿಗೆ ಯೂರಿಯಾ ಅತ್ಯವಶ್ಯಕವಾಗಿದೆ. ಆದರೆ ಕಳೆದೊಂದು ವಾರದಿಂದ ಯೂರಿಯಾ ಗೊಬ್ಬರ ಸಿಗದೇ ರೈತರು ಪರದಾಡುವಂತಾಗಿದೆ. ಉತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ಅವಶ್ಯಕವಿರುವ ಗೊಬ್ಬರವನ್ನು ಒದಗಿಸಬೇಕೆಂಬುದು ಈ ಭಾಗದ ರೈತರು ಒತ್ತಾಯಿಸಿದ್ದಾರೆ.