ಕೊಪ್ಪಳ: ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷ ವರ್ಗವಾರು ಮೀಸಲಾತಿಯನ್ನು ಸದಸ್ಯರ ಸಮ್ಮುಖದಲ್ಲಿ ನಿಗದಿಪಡಿಸಲು ಜಿಲ್ಲಾಡಳಿತ ಜಿಲ್ಲೆಯ ಏಳು ತಾಲೂಕುಗಳಲ್ಲಿ ಆಯ್ಕೆಯಾದ ಸದಸ್ಯರ ಸಭೆಯನ್ನು ಆಯೋಜಿಸಿದೆ.
ಈ ಕುರಿತಂತೆ ಜಿಲ್ಲಾಡಳಿತ ಮಾಹಿತಿ ನೀಡಿದ್ದು, ಸರ್ಕಾರದ ಆದೇಶದ ಅನ್ವಯ ಜಿಲ್ಲೆಯ ಏಳು ತಾಲೂಕುಗಳಲ್ಲಿ ಆಯ್ಕೆಯಾದ ಸದಸ್ಯರ ಸಮ್ಮುಖದಲ್ಲಿ ಸಭೆ ನಡೆಯಲಿದೆ. ತಾಲೂಕುಗಳ ವ್ಯಾಪ್ತಿಯಲ್ಲಿ ಬರುವ 153 ಗ್ರಾಮ ಪಂಚಾಯತ್ಗಳಿಗೆ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆಯ ಮೀಸಲಾತಿಯನ್ನು ನಿಗದಿಪಡಿಸಲಾಗಿದೆ.
ಕನಕಗಿರಿ ತಾಲೂಕಿನ 11 ಗ್ರಾಮ ಪಂಚಾಯಿತಿಗಳ ಸದಸ್ಯರ ಸಭೆಯನ್ನು ಜನವರಿ 11ರಂದು ಬೆಳಗ್ಗೆ 10.30ಕ್ಕೆ ಕನಕಗಿರಿಯ ನಂದಿ ಚಿತ್ರಮಂದಿರದಲ್ಲಿ, ಕಾರಟಗಿ ತಾಲೂಕಿನ 13 ಗ್ರಾಮ ಪಂಚಾಯಿತಿಗಳ ಸದಸ್ಯರ ಸಭೆಯನ್ನು ಜನವರಿ 11 ಮಧ್ಯಾಹ್ನ 3 ಗಂಟೆಗೆ ಕಾರಟಗಿಯ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಸಮುದಾಯದ ಭವನದಲ್ಲಿ, ಗಂಗಾವತಿ ತಾಲೂಕಿನ 18 ಗ್ರಾಮ ಪಂಚಾಯಿತಿಗಳ ಮೀಸಲಾತಿ ನಿಗದಿಯ ಸಭೆ ಜನವರಿ 12ರಂದು ಬೆಳಗ್ಗೆ 10.30 ಗಂಟೆಗೆ ಗಂಗಾವತಿಯ ಶಿವೆ ಚಿತ್ರ ಮಂದಿರದಲ್ಲಿ, ಕುಷ್ಟಗಿ ತಾಲೂಕಿನ 36 ಗ್ರಾಮ ಪಂಚಾಯಿತಿಗಳ ಮೀಸಲಾತಿ ನಿಗದಿ ಸಭೆ ಜನವರಿ 13ರಂದು ಬೆಳಗ್ಗೆ 10.30 ಗಂಟೆಗೆ ಕುಷ್ಟಗಿಯ ಬಸವರಾಜ ಚಿತ್ರಮಂದಿರದಲ್ಲಿ, ಯಲಬುರ್ಗಾ ತಾಲೂಕಿನ 22 ಗ್ರಾಮ ಪಂಚಾಯಿತಿಗಳ ಮೀಸಲಾಗಿ ನಿಗದಿ ಸಭೆ ಜನವರಿ 13ರಂದು ಮಧ್ಯಾಹ್ನ 3 ಗಂಟೆಗೆ ಯಲಬುರ್ಗಾ ಪಟ್ಟಣದ ಪ್ರವೀಣ ಚಿತ್ರಮಂದಿರದಲ್ಲಿ, ಕೊಪ್ಪಳ ತಾಲೂಕಿನ 38 ಗ್ರಾಮ ಪಂಚಾಯ್ತಿಗಳ ಮೀಸಲಾತಿ ನಿಗದಿ ಸಭೆ ಜನವರಿ 16ರಂದು ಕೊಪ್ಪಳದ ಶಿವ ಚಿತ್ರಮಂದಿರದಲ್ಲಿ ಹಾಗೂ ಕುಕನೂರು ತಾಲೂಕಿನ 15 ಗ್ರಾಮ ಪಂಚಾಯಿತಿಗಳ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಗದಿ ಸಭೆ ಆಯ್ಕೆಯಾದ ಸದಸ್ಯರ ಸಮ್ಮುಖದಲ್ಲಿ ಕುಕನೂರಿನ ನವೋದಯ ಶಾಲೆಯ ಅಡಿಟೋರಿಯಂ ಹಾಲ್ನಲ್ಲಿ ಜನವರಿ 16ರಂದು ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ.
ಗ್ರಾಮ ಪಂಚಾಯಿತಿಗೆ ಆಯ್ಕೆಯಾಗಿರುವ ಸದಸ್ಯರು ಆಯಾ ತಾಲೂಕಿನಲ್ಲಿ ನಿಗದಿಪಡಿಸಿದ ಸ್ಥಳದಲ್ಲಿ ಹಾಜರಾಗುವಂತೆ ಜಿಲ್ಲಾಡಳಿತ ತಿಳಿಸಿದೆ.