ಕೊಪ್ಪಳ: ದಕ್ಷಿಣ ಭಾರತದ ಮಹಾಕುಂಭಮೇಳ ಎಂದು ಬಣ್ಣಿತವಾಗಿರುವ ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರೆ ವಿಶೇಷತೆಗಳ ಸಂಗಮ. ಈ ಜಾತ್ರೆಯೂ ಒಂದಿಲ್ಲೊಂದು ವಿಶೇಷತೆಯ ಮೂಲಕ ಜನರ ಗಮನ ಸೆಳೆಯುತ್ತಿದೆ.
ಜಾತ್ರೆಯ ಆವರಣ ಪ್ರವೇಶಿಸಲು ಒಟ್ಟು ಐದು ಮಹಾದ್ವಾರಗಳಿವೆ. ಒಂದೊಂದು ದ್ವಾರಕ್ಕೂ ಒಬ್ಬೊಬ್ಬ ಶ್ರೀಗಳ ಹೆಸರು ಇಡಲಾಗಿದೆ. ಶ್ರೀ ಶಿವಶಾಂತವೀರ ಮಹಾಸ್ವಾಮಿಗಳ ಮಹಾದ್ವಾರದ ಮೂಲಕ ಪ್ರವೇಶಿಸಿದರೆ ಅಲ್ಲಿ ಮಿಠಾಯಿ ಅಂಗಡಿಗಳ ಸಾಲು ಇದೆ. ಮಿಠಾಯಿ ಅಂಗಡಿಗಳ ಮಾಲೀಕರು ತಮ್ಮ ವ್ಯಾಪಾರದ ಜೊತೆ ಜೊತೆಗೆ ಜಾತ್ರೆಗೆ ಬಂದ ಯಾತ್ರಿಕರಿಗೆ ಜಾಗೃತಿ ಸಂದೇಶ ಸಾರುತ್ತಿದ್ದಾರೆ. ಈ ಮಿಠಾಯಿ ಅಂಗಡಿಗಳ ಸಾಲಿನಲ್ಲಿ ಬಹುತೇಕ ಅಂಗಡಿಗಳಲ್ಲಿ ಜನಜಾಗೃತಿಯ ಹಾಗೂ ಸರ್ಕಾರವನ್ನು ಆಗ್ರಹಿಸುವ ಸ್ಲೋಗನ್ ಗಳು ಹೆಚ್ಚು ಗಮನ ಸೆಳೆಯುತ್ತಿವೆ.
ಜನರಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನ ಮಿಠಾಯಿ ಅಂಗಡಿಗಳದ್ದು:
ಪ್ರಮುಖವಾಗಿ ಈ ಬಾರಿ ಜಾತ್ರೆಯ ಗವಿಮಠದ ಸ್ಲೋಗನ್ ಆಗಿರುವ ಲಕ್ಷ ವೃಕ್ಷೋತ್ಸವ ಸ್ಲೋಗನ್ ಮಿಠಾಯಿ ಸಾಲಿನ ಮೊದಲಿನ ಅಂಗಡಿಯಲ್ಲಿ ಅಳವಡಿಸಲಾಗಿದೆ. ದೈವ ಸಾಕ್ಷಾತ್ಕಾರಕ್ಕೆ ಲಕ್ಷ ದೀಪೋತ್ಸವ, ಪ್ರಕೃತಿ ಸಾಕ್ಷಾತ್ಕಾರಕ್ಕೆ ಳಗಷ ವೃಕ್ಷೋತ್ಸವ ಎಂಬ ಸಾಲುಗಳು ಗಮನ ಸೆಳೆಯು ಗಿಡಮರ ಬೆಳೆಸುವಂತೆ ಜಾಗೃತಿ ಸಂದೇಶ ಸಾರುತ್ತಿದೆ. ಇನ್ನುಳಿದಂತೆ ಪ್ರಸ್ತುತ ಸನ್ನಿವೇಶವನ್ನು ಬಿಂಬಿಸುವ ಸರ್ವಧರ್ಮದ ಜನರು ಸೇರುವ ಕೊಪ್ಪಳದ ಜಾತ್ರೆ ಕುರಿತಾದ 'ಸರ್ವಜನಾಂಗದ ಅಕ್ಷಯ ಪಾತ್ರೆ, ಭಾವೈಕ್ಯತೆ ಸಂಗಮದ ಯಾತ್ರೆ, ಅಜ್ಜನ ಜಾತ್ರೆ ಎಂಬ ಸ್ಲೋಗನ್, 'ಏಕತೆ ಹಾಗೂ ಸಹಬಾಳ್ವೆ', 'ಸಂವಿಧಾನ ರಕ್ಷಣೆ ಯುವಕರ ಹೊಣೆ, 'ಈರುಳ್ಳಿ ಬೆಳೆ ಬಂಗಾರ ಬೆಲೆ', ' 'ದೇಶದೊಳಗಿನ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಗೆ ಗುರಿ ಮಾಡಿ', ಶಿಕ್ಷಣ ಮಾರಾಟಕ್ಕಿದೆ ಅದನ್ನು ಕೊಂಡುಕೊಳ್ಳುವವರು ಇರುವದರಿಂದ' ಎಂಬ ಸ್ಲೋಗನ್ ಸೇರಿದಂತೆ ಇನ್ನಿತರೆ ಸ್ಲೋಗನ್ ಗಳು ಜಾತ್ರೆಗೆ ಬಂದ ಯಾತ್ರಿಕರ ಗಮನ ಸೆಳೆಯುತ್ತಿವೆ. ಒಟ್ಟಾರೆಯಾಗಿ ಜಾತ್ರೆಯಲ್ಲಿನ ಮಿಠಾಯಿ ಅಂಗಡಿಗಳು ಈ ಮೂಲಕ ಜನರಲ್ಲಿ ತಿಳುವಳಿಕೆ ಮೂಡಿಸುವ ಪ್ರಯತ್ನ ನಡೆಸಿವೆ.