ಕೊಪ್ಪಳ : ಕಳೆದ ಎರಡು ದಿನಗಳಿಂದ ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ನಿನ್ನೆ ರಾತ್ರಿ ಸುರಿದ ಮಳೆಗೆ ತಾಲೂಕಿನ ಕಿನ್ನಾಳ ಗ್ರಾಮದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರ ಜಲಾವೃತವಾಗಿದೆ. ಇದರಿಂದಾಗಿ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ವಿಶಿಷ್ಟ ಕಲೆ ಮೂಲಕ ಗುರುತಿಸಿಕೊಂಡಿರುವ ಕಿನ್ನಾಳ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರ ಕೆರೆಯಂತಾಗಿದೆ. ಇದರಿಂದ ಆಸ್ಪತ್ರೆಗೆ ಬರಲು ರೋಗಿಗಳು, ವೃದ್ಧರು, ಗರ್ಭಿಣಿಯರು ಹರಸಾಹಸ ಪಡುವಂತಾಯಿತು. ಸ್ವಲ್ಪ ಯಾಮಾರಿದರೂ ಕೂಡ ಕೆಸರು ಗದ್ದೆಯಂತಹ ಹಾದಿಯಲ್ಲಿ ಬೀಳುವುದು ಗ್ಯಾರಂಟಿ.
ಅಲ್ಲದೆ, ಸೋಮವಾರ ಸಂಜೆಯಿಂದ ಆಸ್ಪತ್ರೆ ಆವರಣ ಜಲಾವೃತವಾದ ಹಿನ್ನೆಲೆ ರೋಗಿಗಳು ಆಸ್ಪತ್ರೆಯೊಳಗೆ ಹೋಗುವುದು ಸಾಧ್ಯವಾಗಿಲ್ಲ. ಇದರಿಂದ ವೈದ್ಯರು ಆವರಣದಲ್ಲೇ ಕುಳಿತು ಚಿಕಿತ್ಸೆ ನೀಡಿದ್ದಾರೆ. ಕೆಲ ಸಮಯದ ನಂತರ ಆಸ್ಪತ್ರೆಯ ಕಾಂಪೌಂಡ್ ಒಡೆದ ಪರಿಣಾಮ ತಾತ್ಕಾಲಿಕ ಗೇಟ್ ಮಾಡಿಕೊಳ್ಳಲಾಗಿತ್ತು.
ಸಂಜೆ ವೇಳೆಗೆ ಗ್ರಾಮದ ಯುವಕರೇ ಟ್ರ್ಯಾಕ್ಟರ್ನಲ್ಲಿ ಮೋಟಾರ್ ಪಂಪ್ ತಂದು ಆಸ್ಪತ್ರೆ ಆವರಣದಲ್ಲಿದ್ದ ಮಳೆ ನೀರನ್ನು ಹೊರಗೆ ಹಾಕಿದ್ದಾರೆ. ಇಷ್ಟೆಲ್ಲ ಸಮಸ್ಯೆಯಾದರೂ ಸಹ ಯಾವೊಬ್ಬ ಜನಪ್ರತಿನಿಧಿಗಳು ಕೂಡ ಇತ್ತ ಮುಖಮಾಡಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.