ಕೊಪ್ಪಳ : ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ವಿಶಿಷ್ಠ ಕಲಾಕೃತಿಗಳ ಮೂಲಕ ಪ್ರಸಿದ್ದಿ ಪಡೆದಿರುವ ಜಿಲ್ಲೆಯ ಕಿನ್ನಾಳ ಕಲೆ ಈಗ ಅಂಚೆ ಕಚೇರಿಯ ಲಕೋಟೆಗಳಲ್ಲಿ ಮುದ್ರಿತವಾಗಲಿದೆ. ಕಿನ್ನಾಳ ಕಲೆ ತನ್ನ ಹಿರಿಮೆ ಗರಿಮೆಗಳನ್ನು ದೇಶ-ವಿದೇಶಗಳಲ್ಲಿಯೂ ಮತ್ತಷ್ಟು ಪಸರಿಸಲಿದೆ.
ವಿಜಯನಗರ ಸಾಮ್ರಾಜ್ಯ ಕಾಲದ ಪಾರಂಪರಿಕ ಕಲೆಯಾಗಿರುವ ಕಿನ್ನಾಳ ಕಲೆ ಅತ್ಯಂತ ಪ್ರಸಿದ್ಧಿ ಪಡೆದಿದೆ. ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದಲ್ಲಿನ ಚಿತ್ರಗಾರ ಕುಟುಂಬಗಳು ಈ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬರುತ್ತಿವೆ. 2013ರ ಜನವರಿ 26ರಂದು ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಈ ಕಿನ್ನಾಳ ಕಲೆ ಸ್ತಬ್ಧ ಚಿತ್ರದ ಮೂಲಕ ಗಮನ ಸೆಳೆದಿತ್ತು.
ಗ್ರಾಮ ದೇವತೆಗಳ ಮೂರ್ತಿಗಳು, ಬಣ್ಣದ ಗೌರಿ, ಜಯವಿಜಯ, ಗೊಂಬೆಗಳು, ಹಣ್ಣಿನ ಬುಟ್ಟಿ, ವಾಲ್ಪ್ಲೇಟ್ಗಳು ಸೇರಿದಂತೆ ಮನಸೂರೆಗೊಳ್ಳುವ ಕಲಾಕೃತಿಗಳು ಈ ಕಲೆಯ ವಿಶೇಷತೆ. ವಿಶಿಷ್ಟ ಬಣ್ಣದ ಮೂಲಕ ಈ ಕಲಾಕೃತಿಗಳು ತಮ್ಮ ಹಿರಿಮೆ-ಗರಿಮೆ ಸಾರುತ್ತಿವೆ. ಸದ್ಯ ಇಂತಹ ಅಪರೂಪದ ಕಲೆಯನ್ನು ಭಾರತ ಸರ್ಕಾರ ಅಂಚೆ ಇಲಾಖೆಯ ಮೂಲಕ ಮತ್ತಷ್ಟು ಪ್ರಚುರಪಡಿಸಲು ಮುಂದಾಗಿದೆ.
ದೇಶದ 250 ಭೌಗೋಳಿಕ ಪ್ರದೇಶಗಳ ವಿಶೇಷತೆಯನ್ನು ಅಂಚೆ ಲಕೋಟೆಗಳಲ್ಲಿ ಮುದ್ರಿಸಿ ಬಿಡುಗಡೆ ಮಾಡಲಾಗುತ್ತದೆ. ಅದರಂತೆ ಕಿನ್ನಾಳ ಕಲೆ ಆಯ್ಕೆಗೊಂಡಿದೆ. ಕಿನ್ನಾಳ ಕಲೆಯ ಸೌಂದರ್ಯ ಇನ್ಮುಂದೆ ಅಂಚೆ ಲಕೋಟೆಗಳ ಮೇಲೆ ರಾರಾಜಿಸಲಿದೆ. ಅಂಚೆ ಲಕೋಟೆಗಳು ನಾಳೆ ಆಗಸ್ಟ್ 31ರಂದು ಕಿನ್ನಾಳದಲ್ಲಿಯೇ ಬಿಡುಗಡೆಯಾಗಲಿವೆ.
ಪಾರಂಪರಿಕ ಐತಿಹಾಸಿಕ ಕಿನ್ನಾಳ ಕಲೆಯು ಅಂಚೆ ಲಕೋಟೆಯ ಮೇಲೆ ಮುದ್ರಿಸಿ ಪ್ರಚುರಪಡಿಸಲು ಮುಂದಾಗಿರುವ ಸರ್ಕಾರ ಹಾಗೂ ಅಂಚೆ ಇಲಾಖೆಯ ಈ ಕಾರ್ಯಕ್ಕೆ ಕಿನ್ನಾಳ ಕಲೆಯ ಕಲಾವಿದರು ಹರ್ಷ ವ್ಯಕ್ತಪಡಿಸಿದ್ದಾರೆ.