ಕೊಪ್ಪಳ : ಕೇಂದ್ರ ಸರ್ಕಾರದ ವತಿಯಿಂದ ಜಿಲ್ಲಾಸ್ಪತ್ರೆಯಲ್ಲಿ ಪ್ರತಿನಿತ್ಯ ಸುಮಾರು 2 ಸಾವಿರ ಲೀಟರ್ ಆಕ್ಸಿಜನ್ ಉತ್ಪಾದನಾ ಘಟಕ ಮಂಜೂರಾಗಿದೆ. ಶೀಘ್ರದಲ್ಲಿಯೇ ಕೆಲಸ ಪ್ರಾರಂಭವಾಗಲಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಹೇಳಿದ್ದಾರೆ.
ಕೊರೊನಾ ಎರಡನೇ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆಕ್ಸಿಜನ್ ಅಗತ್ಯವಾಗಿದೆ. ಈಗ ಜಿಲ್ಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ಆಕ್ಸಿಜನ್ ಉತ್ಪಾದನೆಯಾಗುತ್ತಿದ್ದು, ಜಿಲ್ಲೆಯ ಕೋಟಾದಡಿ ಆಕ್ಸಿಜನ್ ಲಭ್ಯವಾಗುತ್ತಿದೆ. ಜಿಲ್ಲೆಯಲ್ಲಿನ ಆಸ್ಪತ್ರೆಗಳಿಗೆ ಈಗ ಪ್ರತಿ ದಿನ ಸುಮಾರು 13 ಕೆಎಲ್ ಆಕ್ಸಿಜನ್ ಬಳಕೆಯಾಗುತ್ತಿದೆ.
ನಿತ್ಯವೂ ಬಳಕೆ ಪ್ರಮಾಣದಲ್ಲಿ ವ್ಯತ್ಯಾಸವಾಗುತ್ತಿರುತ್ತದೆ. ಹೀಗಾಗಿ ಜಿಲ್ಲೆಯಲ್ಲಿ ಇನ್ನಷ್ಟು ಆಕ್ಸಿಜನ್ ಉತ್ಪಾದನೆಗೆ ಮುಂದಾಗುತ್ತಿದ್ದು ಕೇಂದ್ರ ಸರ್ಕಾರದಿಂದ ಆಕ್ಸಿಜನ್ ಘಟಕ ಸ್ಥಾಪನೆಗೆ ಅನುಮತಿ ನೀಡಿದೆ. ಹೆದ್ದಾರಿ ಪ್ರಾಧಿಕಾರದಿಂದ ಜಿಲ್ಲಾಸ್ಪತ್ರೆಯ ಆವರಣದಲ್ಲಿ ಕಾಮಗಾರಿ ನಡೆಯಲಿದೆ.
ನಿತ್ಯ ಸುಮಾರು 2 ಸಾವಿರ ಲೀಟರ್ ಉತ್ಪಾದನಾ ಸಾಮರ್ಥ್ಯದ ಘಟಕ ಇದಾಗಿದ್ದು ಶೀಘ್ರವೇ ಕಾಮಗಾರಿ ಶುರುವಾಗಲಿದೆ. ಅತೀ ಶೀಘ್ರದಲ್ಲಿ ಈ ಘಟಕ ಆಕ್ಸಿಜನ್ ಉತ್ಪಾದನೆಗೆ ಸಜ್ಜಾಗಲಿದೆ ಎಂದ್ರು.
ಇನ್ನು, ಕೆಕೆಆರ್ಡಿಬಿಯಿಂದ 13 ಕಡೆ ಆಕ್ಸಿಜನ್ ಸಂಗ್ರಹ ಘಟಕಗಳಿದ್ದು ಸಮುದಾಯ ಆರೋಗ್ಯ ಕೇಂದ್ರ ಸೇರಿದಂತೆ ಅವಶ್ಯವಿರುವ ಕಡೆ ಆದಷ್ಟು ಬೇಗ ಆರಂಭವಾಗಲಿವೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್ ಮಾಹಿತಿ ನೀಡಿದರು.