ಕೊಪ್ಪಳ : ನಾಳೆಯಿಂದ ದೇವಾಲಯ ತೆರೆಯಲು ಸರ್ಕಾರ ಅನುಮತಿ ನೀಡಿದ ಹಿನ್ನೆಲೆ ನಗರದ ಶ್ರೀ ಗವಿಸಿದ್ಧೇಶ್ವರ ಮಠದಲ್ಲಿ ಪೂರ್ವ ಸಿದ್ಧತೆ ನಡೆಯುತ್ತಿದೆ.
ನಾಳೆ ಸೋಮವಾರವಾಗಿರುವುದರಿಂದ ಗವಿಮಠಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಆಗಮಿಸುವ ಸಾಧ್ಯತೆಯಿದೆ. ಹೀಗಾಗಿ ಶ್ರೀಮಠಕ್ಕೆ ಬರುವ ಭಕ್ತರಿಗೆ ಗರ್ಭ ಗುಡಿಯ ಪ್ರವೇಶ ಅವಕಾಶವಿರುವುದಿಲ್ಲ. ಗರ್ಭಗುಡಿಯ ಹೊರಗೆ ನಿಂತು ಸಾಮಾಜಿಕ ಅಂತರ ಕಾಯ್ದುಕೊಂಡು ಕತೃ ಗದ್ದುಗೆಯ ದರ್ಶನ ಪಡೆಯಲು ಸಿದ್ಧತೆ ಮಾಡಲಾಗಿದೆ. ಅಲ್ಲದೆ ಭಕ್ತರಿಗೆ ತೀರ್ಥ, ಪ್ರಸಾದ ನೀಡಲಾಗುವುದಿಲ್ಲ.
ಭಕ್ತರಿಗಾಗಿ ಗರ್ಭ ಗುಡಿಯ ಸುತ್ತಲೂ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಬಾಕ್ಸ್ ಮಾದರಿ ಬಣ್ಣ ಹಚ್ಚಲಾಗಿದೆ. ಮಠದ ಆವರಣದಲ್ಲಿನ ಕುಳಿತುಕೊಳ್ಳುವ ಜಾಗದಲ್ಲಿಯೂ ಇದೇ ಮಾದರಿ ಸಾಮಾಜಿಕ ಅಂತರದ ಬಾಕ್ಸ್ ಹಾಕಲಾಗಿದೆ.