ಕೊಪ್ಪಳ: ಧಾರಾಕಾರ ಮಳೆಯಿಂದಾಗಿ ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತರಲ್ಲಿ ಕಣ್ಣೀರು ಬರುವಂತೆ ಮಾಡಿದೆ. ಎರಡು ಮೂರು ದಿನಗಳ ಕಾಲ ಸುರಿದ ಮಳೆಯು ಈರುಳ್ಳಿಯನ್ನು ಕೊಳೆಯುವಂತೆ ಮಾಡಿದೆ. ಉತ್ತಮ ಬೆಲೆ ಇದೆ ಎಂದುಕೊಂಡು ಮೊಗದಲ್ಲಿ ಒಂದಿಷ್ಟು ನಗು ಅರಳಿಸಿಕೊಂಡಿದ್ದ ರೈತರಿಗೆ ನಿರಾಸೆ ಮೂಡಿಸಿದೆ.
ಕಳೆದ ಒಂದು ವಾರದಿಂದ ಕೊಪ್ಪಳ ಜಿಲ್ಲೆಯಲ್ಲಿಯೂ ಮೋಡ ಕವಿದ ವಾತಾವರಣ ಹಾಗೂ ಎರಡು ಮೂರು ದಿನಗಳ ಕಾಲ ಧಾರಾಕಾರವಾಗಿ ಮಳೆ ಸುರಿದಿದೆ. ಮಳೆಯಾಗಿರೋದು ಒಂದು ಕಡೆ ರೈತರಲ್ಲಿ ಮಂದಹಾಸ ಮೂಡುವಂತೆ ಮಾಡಿದೆಯಾದರೂ ಕಟಾವು ನಡೆಯುತ್ತಿರುವ ಬೆಳೆ ಹಾಳಾಗುವ ಹಂತಕ್ಕೆ ಬರುತ್ತಿರೋದು ರೈತರ ಚಿಂತೆಗೆ ಕಾರಣವಾಗಿದೆ.
ಈಗ ಈರುಳ್ಳಿ ಬೆಲೆ ಒಂದಿಷ್ಟು ಉತ್ತಮವಾಗಿದೆ. ಹೀಗಾಗಿ ಮಂಗಳಾಪುರ, ಹೊರತಟ್ನಾಳ್ ಸೇರಿದಂತೆ ಜಿಲ್ಲೆಯ ಅನೇಕ ಭಾಗದಲ್ಲಿ ರೈತರು ಕೈಗೆ ಬಂದ ಈರುಳ್ಳಿ ಬೆಳೆಯನ್ನು ಕಟಾವು ಮಾಡಿದ್ದಾರೆ. ಧಾರಾಕಾರ ಮಳೆಯಾಗಿರುವುದರಿಂದಾಗಿ ಕಿತ್ತು ಹಾಕಿರುವ ಈರುಳ್ಳಿ ಕೆಲವೆಡೆ ಹಾಗೆಯೇ ನೆಲದ ಮೇಲೆ ಬಿದ್ದಿವೆ. ಅದನ್ನು ಹೊರಗೆ ತಂದು ಬೇರೆ ಜಾಗಕ್ಕೂ ಹಾಕಲಾಗುತ್ತಿಲ್ಲ. ಮೂರ್ನಾಲ್ಕು ದಿನದಿಂದ ಈರುಳ್ಳಿ ಹಸಿಯಾದ ಭೂಮಿಯಲ್ಲಿ ಬಿದ್ದಿರುವುದರಿಂದ ಕೊಳೆಯುತ್ತಿದೆ. ಇದರಿಂದಾಗಿ ಕೈಗೆ ಬಂದ ತುತ್ತು ಬಾಯಿಗೆ ಬರದಂತಹ ಪರಸ್ಥಿತಿ ಎದುರಾಗಿದೆ.
ಒಂದು ಎಕರೆಗೆ ಸುಮಾರು 50 ಸಾವಿರ ರುಪಾಯಿಗೂ ಅಧಿಕ ಹಣ ಖರ್ಚು ಮಾಡಿದ್ದೇವೆ. ಉತ್ತಮ ಬೆಳೆ ಬಂದಿತ್ತು. ಆದರೆ ಕಟಾವು ಮಾಡುತ್ತಿರುವಾಗ ಪ್ರಾರಂಭವಾದ ಮಳೆ ಮತ್ತು ಮೋಡ ಕವಿದ ವಾತಾವರಣ ಈರುಳ್ಳಿ ಬೆಳೆ ಕೊಳೆಯುವಂತೆ ಮಾಡಿದೆ. ಅರ್ಧಕ್ಕರ್ಧ ಬೆಳೆ ಕೊಳೆತಿದೆ ಎಂದು ತಮ್ಮ ಅಳಲು ತೋಡಿಕೊಳ್ತಾರೆ ರೈತರು.