ಕೊಪ್ಪಳ: ಇಬ್ಬರು ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಜಿಲ್ಲೆಯಲ್ಲಿ ಇಂದು 8 ಜನರಿಗೆ ಕೊರೊನಾ ಪಾಸಿಟಿವ್ ದೃಢವಾಗಿದ್ದು, ಸೋಂಕಿತರ ಸಂಖ್ಯೆ 157ಕ್ಕೆ ಏರಿದೆ.
ಈ ಕುರಿತು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ಮಾಹಿತಿ ನೀಡಿದ್ದು, ಗಂಗಾವತಿ ತಾಲೂಕಿನಲ್ಲಿ 1 ಹಾಗೂ ಕೊಪ್ಪಳ ತಾಲೂಕಿನಲ್ಲಿ ಏಳು ಜನರಿಗೆ ಇಂದು ಪಾಸಿಟಿವ್ ದೃಢಪಟ್ಟಿದೆ. ಕೊಪ್ಪಳದ 37 ವರ್ಷದ ಹಾಗೂ 32 ವರ್ಷದ ಆರೋಗ್ಯ ಸಿಬ್ಬಂದಿಗೆ ಕೊರೊನಾ ದೃಢಪಟ್ಟಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್ನ 65 ವರ್ಷದ ಪುರುಷ, ಹಿಟ್ನಾಳ್ ಗ್ರಾಮದ 48 ವರ್ಷದ ಮಹಿಳೆ, ಕೊಪ್ಪಳ ನಗರದ 26 ವರ್ಷದ ಮಹಿಳೆ, 20 ವರ್ಷದ ಮಹಿಳೆ, ಕಾರವಾರದ ಟ್ರಾವೆಲ್ ಹಿಸ್ಟರಿ ಇರುವ ಹೊಸಗೊಂಡಬಾಳ ಗ್ರಾಮದ 38 ವರ್ಷದ ಪುರುಷನಿಗೆ ಕೋವಿಡ್ ದೃಢಪಟ್ಟಿದೆ.
ಬೆಂಗಳೂರು ಟ್ರಾವೆಲ್ ಹಿಸ್ಟರಿ ಇರುವ ಗಂಗಾವತಿ ನಗರದ 41 ವರ್ಷದ ಪುರುಷನಿಗೆ ಸೋಂಕು ತಗುಲಿದೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 157 ಜನರಿಗೆ ಕೊರೊನಾ ಪಾಸಿಟಿವ್ ದೃಢಪಟ್ಟಿದ್ದು, ಇಬ್ಬರು ಸೋಂಕಿಗೆ ಬಲಿಯಾಗಿದ್ದಾರೆ. 87 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಕುಷ್ಟಗಿ ತಾಲೂಕಿನ ದೊಣ್ಣೆಗುಡ್ಡದ ಓರ್ವ ಸೋಂಕಿತ ಬೆಂಗಳೂರಿನ ಬಿಬಿಎಂಪಿ ಆಸ್ಪತ್ರೆಯಲ್ಲಿ ದಾಖಲಾಗಿದ್ದಾನೆ. 67 ಸಕ್ರಿಯ ಪ್ರಕರಣಗಳಿಗೆ ಕೋವಿಡ್-19 ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ ಎಂದು ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಾಳ್ಕರ್ ತಿಳಿಸಿದ್ದಾರೆ.