ಗಂಗಾವತಿ : ಮೀಸಲಾತಿ ಪ್ರಶ್ನಿಸಿ ತನ್ನ ಹೆಸರಲ್ಲಿ ಧಾರವಾಡದ ಹೈಕೋರ್ಟ್ನಲ್ಲಿ ಕೇವಿಯಟ್ ವ್ಯಾಜ್ಯ ಹೂಡಲಾಗಿದೆ. ಆದರೆ, ಇದಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ ಎಂದು ತಾಲೂಕಿನ ವಡ್ಡರಹಟ್ಟಿ ಗ್ರಾಮ ಪಂಚಾಯತ್ 6ನೇ ವಾರ್ಡ್ನ ನಿವಾಸಿ ಯಹೋನಾ ತಿಳಿಸಿದ್ದಾನೆ.
ಗ್ರಾಮ ಪಂಚಾಯತ್ ಚುನಾವಣೆಯ ಮೀಸಲಾತಿ ಪ್ರಶ್ನಿಸುವಂತೆ ಗ್ರಾಮದ ಕೆಲ ಬಿಜೆಪಿಗರು ಹಾಗೂ ನಾಯಕ ಸಮಾಜದ ಕೆಲ ಮುಖಂಡರು ಒಟ್ಟು 23 ಜನ ತನಗೆ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಯಹೋನಾ ಎಂಬ ಯುವಕನ ಹೆಸರಲ್ಲಿ ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿದೆ.
ಆದರೆ, ಈ ಪ್ರಕರಣಕ್ಕೂ ತನಗೂ ಯಾವುದೇ ಸಂಬಂಧ ಇಲ್ಲ. ತಾನು ಅನಕ್ಷರಸ್ಥನಾಗಿದ್ದು, ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಮಣ್ಣ ನಾಯಕ್ ಹಾಗೂ ಕೆಲವರು ವಾರ್ಡ್ಗೆ ಸೌಲಭ್ಯ ಕಲ್ಪಿಸುವುದಾಗಿ ಹೇಳಿ ನಾನು ಸೇರಿದಂತೆ ಹಲವರಿಂದ ಸಹಿ ಪಡೆದುಕೊಂಡಿದ್ದಾರೆ ಎಂದು ಯಹೋನಾ ಆರೋಪಿಸಿದರು.
ಅನಗತ್ಯ ಗೊಂದಲ ಸೃಷ್ಟಿಸುತ್ತಿರುವ ಮತ್ತು ಗ್ರಾಮದಲ್ಲಿ ಶಾಂತಿ ಸುವ್ಯವಸ್ಥೆ ಕದಡಲು ಯತ್ನಿಸುತ್ತಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ನಾಯಕ ಸಮಾಜದ ಮುಖಂಡರು ಜಿಲ್ಲಾಧ್ಯಕ್ಷ ರತ್ನಾಕರ್ ನೇತೃತ್ವದಲ್ಲಿ ಇಲ್ಲಿನ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.