ಗಂಗಾವತಿ: ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾ ಕಣ ರಾಜ್ಯದ ಗಮನ ಸೆಳೆದಿದೆ. ಮಾಜಿ ಸಚಿವ, ಗಣಿಧಣಿ ಗಾಲಿ ಜನಾರ್ದನ ರೆಡ್ಡಿ ಅವರಿಂದಾಗಿ ರಾಜ್ಯದಲ್ಲಿ ಹೈ ವೊಲ್ಟೇಜ್ ಕ್ಷೇತ್ರವಾಗಿ ಗುರುತಿಸಿಕೊಂಡಿದೆ. ಕಳೆದ ಇಪ್ಪತ್ತು ವರ್ಷಗಳಿಂದ ಒಮ್ಮೆ ಜೆಡಿಎಸ್, ಮತ್ತೊಮ್ಮೆ ಬಿಜೆಪಿ ಮಧ್ಯೆ ಕಣ್ಣಾಮುಚ್ಚಲೆಯಂತಾಗಿದ್ದ ಸೋಲು-ಗೆಲುವಿನ ಲೆಕ್ಕಾಚಾರ, ಈಗ ರೆಡ್ಡಿ ಎಂಟ್ರಿಯಿಂದಾಗಿ ಫಲಿತಾಂಶ ಬದಲಾಗುತ್ತಾ? ಎಂಬ ಕುತೂಹಲ ಜನರದ್ದು.
ಗಂಗಾವತಿಯ ಚುನಾವಣಾ ಅಖಾಡಕ್ಕೆ ಕಾಂಗ್ರೆಸ್‌ನಿಂದ ಮಾಜಿ ಸಚಿವ ಇಕ್ಬಾಲ್ ಅನ್ಸಾರಿ, ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಜನಾರ್ದನ ರೆಡ್ಡಿ, ಬಿಜೆಪಿಯಿಂದ ಪರಣ್ಣ ಮುನವಳ್ಳಿ ಸ್ಪರ್ಧಿಸಿದ್ದು ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಇತ್ತೀಚಿಗೆ ಬಿಜೆಪಿ ತೊರೆದು ಪಕ್ಷ ಸೇರಿದ ಹೆಚ್.ಆರ್.ಚನ್ನಕೇಶವ ಅವರಿಗೆ ಜೆಡಿಎಸ್ ಮಣೆ ಹಾಕಿದೆ. ಗೆಲುವು ಯಾರಿಗೇ ಸಿಕ್ಕರೂ ಅಂತರ ಮಾತ್ರ ಎರಡರಿಂದ ಐದು ಸಾವಿರ ಮತಗಳು ಮಾತ್ರ ಇರಲಿದೆ ಎಂಬ ಭವಿಷ್ಯವಾಣಿ ಕೇಳಿ ಬರುತ್ತಿದೆ.
ಕೃಷಿ ಆಧಾರಿತ ಕ್ಷೇತ್ರ: ಗಂಗಾವತಿ ಕ್ಷೇತ್ರದ ಶೇ.45ರಷ್ಟು ಭಾಗ ನಗರ ಪ್ರದೇಶ ಹಾಗೂ ಶೇ.55ರಷ್ಟು ಭಾಗ ಗ್ರಾಮೀಣ ಪ್ರದೇಶದಲ್ಲಿ ಹರಡಿದೆ. ಕೊಪ್ಪಳ ತಾಲೂಕಿನ ಇರ್ಕಲ್ಗಡ ಹೋಬಳಿಯ ಹಲವು ಗ್ರಾಮಗಳು ಗಂಗಾವತಿ ಕ್ಷೇತ್ರದ ವ್ಯಾಪ್ತಿಗೆ ಒಳಪಡುತ್ತಿವೆ. ನಗರ ಹೊರತುಪಡಿಸಿದರೆ ಗ್ರಾಮೀಣ ಭಾಗ ಬಹುತೇಕ ಕೃಷಿ ಆಧಾರಿತವೇ. ತುಂಗಭದ್ರಾ ಎಡದಂಡೆ ನಾಲೆ ಆಶ್ರಯಿಸಿ ಕೃಷಿ ಮಾಡಲಾಗುತ್ತಿದ್ದು, ಶೇ.68ರಷ್ಟು ಭಾಗ ನೀರಾವರಿ ಇದೆ. ಶೇ.32ರಷ್ಟು ಭಾಗದ ಕೃಷಿ ಬಾಹ್ಯ ನೀರಾವರಿ ಸಂಪನ್ಮೂಲಗಳನ್ನು ಅವಲಂಬಿಸಿದೆ.
ಕ್ಷೇತ್ರದ ರಾಜಕೀಯ ಇತಿಹಾಸ: ಗಂಗಾವತಿ ವಿಧಾನಸಭಾ ಕ್ಷೇತ್ರ 1952ರಲ್ಲಿ ರಚನೆಯಾಗಿದೆ. ಮೊದಲ ಅವಧಿಗೆ ಇಲ್ಲಿ ಚುನಾವಣೆ ನಡೆದಿರಲಿಲ್ಲ. 1957ರಿಂದ ಇಲ್ಲಿವರೆಗೂ ನಡೆದ ಒಟ್ಟು 15 ಚುನಾವಣೆಯಲ್ಲಿ ಒಟ್ಟು 9 ಬಾರಿ ಕಾಂಗ್ರೆಸ್ ಜಯಗಳಿಸಿದೆ. ಒಮ್ಮೆ ಪಕ್ಷೇತರ ಅಭ್ಯರ್ಥಿ, ಮತ್ತೊಮ್ಮೆ ಜನತಾ ಪಕ್ಷದಿಂದ ಒಬ್ಬರು ಗೆಲುವು ದಾಖಲಿಸಿದ್ದಾರೆ. 2004 ದಿಂದೀಚೆ ಕಾಂಗ್ರೆಸ್ ಪಕ್ಷಕ್ಕೆ ಗೆಲವು ಮರೀಚಿಕೆಯಾಗಿದೆ. ಎರಡು ಬಾರಿ ಜೆಡಿಎಸ್, ಎರಡು ಬಾರಿ ಬಿಜೆಪಿ ಗೆಲುವು ದಾಖಲಿಸಿವೆ.
1957ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಭೀಮಸೇನ್ ರಾವ್ ದೇಸಾಯಿ, 1962 ಮತ್ತು 1967ರಲ್ಲಿ ಕಾಂಗ್ರೆಸ್ನ ತಿರುಮಲ ದೇವರಾಯಲು ಸತತ ಎರಡು ಬಾರಿ ಗೆಲುವು ದಾಖಲಿಸಿದ್ದರು. 1972ರಲ್ಲಿ ಕಾಂಗ್ರೆಸ್ನ ಹೆಚ್.ಆರ್.ಶ್ರೀರಾಮುಲು ಗೆದ್ದಿದ್ದರು. ಶ್ರೀರಾಮುಲು ಅವರ ನಿಧನದಿಂದಾಗಿ 1974ರಲ್ಲಿ ನಡೆದ ಚುನಾವಣೆ ಕಾಂಗ್ರೆಸ್ನ ಹೆಚ್.ಜಿ.ರಾಮುಲು ಆಯ್ಕೆಯಾಗಿದ್ದರು. 1978ರಲ್ಲಿ ಕಾಂಗ್ರೆಸ್ನ ಹೆಚ್.ಸಿ.ಯಾದವರಾವ್ ಗೆದ್ದಿದ್ದರು.
1983ರಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹೆಚ್.ಎಸ್.ಮುರಳಿಧರ, 1985ರಲ್ಲಿ ಜೆಎಸ್ಪಿಯ ಗೌಳಿ ಮಹಾದೇವಪ್ಪ ಆಯ್ಕೆಯಾಗಿದ್ದರು. ನಂತರ ಕಾಂಗ್ರೆಸ್ ಮತ್ತೆ ಕ್ಷೇತ್ರವನ್ನು ತನ್ನ ಕೈವಶ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. 1989, 1994, 1999ರ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಕಾಂಗ್ರೆಸ್ನ ಶ್ರೀರಂಗರದೇವರಾಯಲು ಹ್ಯಾಟ್ರಿಕ್ ಗೆಲುವು ಸಂಪಾದಿಸಿದ್ದರು.
ಬದಲಾದ ರಣಕಣ: ಕ್ಷೇತ್ರದ ಚುನಾವಣೆಗೆ ಕಾವು ಸಿಕ್ಕಿದ್ದೇ 1999ರ ನಂತರ. 2004ರಿಂದ ರಾಜಕೀಯಕ್ಕೆ ಹೊಸ ಯುವಕರ ಪ್ರವೇಶವಾಗಿದೆ. 2004ರಿಂದ 2019ರವರೆಗೆ ಒಟ್ಟು ನಾಲ್ಕು ಅವಧಿಗೆ ಒಮ್ಮೆ ಜೆಡಿಎಸ್ ಪಕ್ಷದ ಇಕ್ಬಾಲ್ ಅನ್ಸಾರಿ, ಮತ್ತೊಮ್ಮೆ ಬಿಜೆಪಿಯ ಪರಣ್ಣ ಮುನವಳ್ಳಿ ಆಯ್ಕೆಯಾಗುತ್ತಲೇ ಬಂದಿದ್ದಾರೆ. 2004ರಲ್ಲಿ ಜೆಡಿಎಸ್ನ ಇಕ್ಬಾಲ್ ಅನ್ಸಾರಿ, 2008ರಲ್ಲಿ ಬಿಜೆಪಿಯಿಂದ ಪರಣ್ಣ ಮುನವಳ್ಳಿ, 2013ರಲ್ಲಿ ಮತ್ತೆ ಜೆಡಿಎಸ್ನ ಇಕ್ಬಾಲ್ ಅನ್ಸಾರಿ ಗೆದ್ದಿದ್ದರು. 2018ರಲ್ಲಿ ಕಾಂಗ್ರೆಸ್‌ನಿಂದ ಇಕ್ಬಾಲ್ ಅನ್ಸಾರಿ ಕಣಕ್ಕಿಳಿದು ಸೋತಿದ್ದರು. ಬಿಜೆಪಿಯಿಂದ ಪರಣ್ಣ ಮುನವಳ್ಳಿ ಆಯ್ಕೆಯಾಗಿದ್ದರು. ಹೀಗೆ ಒಮ್ಮೆ ಗೆದ್ದವರು, ಮತ್ತೊಮ್ಮೆ ಗೆಲುವು ದಾಖಲಿಸಲು ಸಾಧ್ಯವಾಗಿಲ್ಲ.
ರೆಡ್ಡಿ ಎಂಟ್ರಿ ಕಾವೇರಿದ ಕಣ: ಕ್ಷೇತ್ರದಲ್ಲಿ ಇದುವರೆಗೂ ಕೇವಲ ಸ್ಥಳೀಯರ ನಡುವೆಯೇ ಪೈಪೋಟಿ ಏರ್ಪಟ್ಟು, ವಿಧಾನಸಭೆಗೆ ಆಯ್ಕೆಯಾಗುತ್ತಿದ್ದರು. ಆದರೆ, ಇದೇ ಮೊದಲ ಬಾರಿಗೆ ಗಣಿಧಣಿ ಜನಾರ್ದನ ರೆಡ್ಡಿ ಗಂಗಾವತಿ ಅಖಾಡಕ್ಕೆ ಪ್ರವೇಶಿಸಿದ್ದು, ಚುನಾವಣೆ ಕಾವೇರಿದೆ. ಕಳೆದ ಎರಡು ದಶಕದಲ್ಲಿ ಇಕ್ಬಾಲ್ ಅನ್ಸಾರಿ ಮತ್ತು ಪರಣ್ಣ ಮುನವಳ್ಳಿ ನೇರಾನೇರ ಜಿದ್ದಾಜಿದ್ದಿಯನ್ನು ಕಂಡಿದ್ದ ಕ್ಷೇತ್ರದಲ್ಲಿ ರೆಡ್ಡಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ. ಇದು ಫಲಿತಾಂಶದ ಮೇಲೆ ಯಾವ ರೀತಿ ಪರಿಣಾಮ ಬೀರಲಿದೆ ಮತ್ತು ಗೆಲುವು ಯಾರಿಗೆ ದಕ್ಕಲಿದೆ ಎಂಬುವುದು ಕುತೂಹಲಕ್ಕೆ ಕಾರಣವಾಗಿದೆ.
ಮತದಾರರ ಮಾಹಿತಿ: 1957ರಲ್ಲಿ ಕೇವಲ 54.753ರಷ್ಟಿದ್ದ ಕ್ಷೇತ್ರದ ಮತದಾರರ ಸಂಖ್ಯೆ ಇದೀಗ 1,97,219ಕ್ಕೆ ತಲುಪಿದೆ. ಸುಮಾರು ನಾಲ್ಕು ಪಟ್ಟು ಮತದಾರರ ಸಂಖ್ಯೆ ಹೆಚ್ಚಳವಾಗಿದೆ. 2023ರ ಎಪ್ರಿಲ್ 1ಕ್ಕೆ ಕೊನೆಗೊಂಡಂತೆ ಒಟ್ಟು 235 ಮತಗಟ್ಟೆಗಳಿವೆ. ಒಟ್ಟು 1,97,219 ಮತದಾರರ ಪೈಕಿ ಮಹಿಳಾ ಮತದಾರರೇ ಚುನಾವಣಾ ಫಲಿತಾಂಶದಲ್ಲಿ ನಿರ್ಣಾಯಕರಾಗಲಿದ್ದಾರೆ. 99,323 ಮಹಿಳೆಯರಿದ್ದರೆ, 97,888 ಪುರುಷರು ಹಾಗೂ 10 ಇತರ ಮತದರಾರರಿದ್ದಾರೆ.
ಇದನ್ನೂ ಓದಿ: ಯಲಬುರ್ಗಾ ಕ್ಷೇತ್ರದಲ್ಲಿ ಕೈ - ಕಮಲ ನೇರ ಹಣಾಹಣಿ: ಹಾಲಪ್ಪ, ರಾಯರಡ್ಡಿ ನಡುವೆ ಗೆಲ್ಲೋರ್ಯಾರು?