ಗಂಗಾವತಿ: ಕನಕಗಿರಿ ತಾಲೂಕಿನ ಮುಸಲಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಬಳಬಂಡಿ ಗ್ರಾಮದಲ್ಲಿ ಶಾಸಕರ ಕ್ಷೇತ್ರಾಭಿವೃದ್ಧಿ ಅನುದಾನದಲ್ಲಿ ನಡೆಯುತ್ತಿರುವ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಅತಿಕ್ರಮ ತೆರವು ಮಾಡದೆ ಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಗ್ರಾಮದ ಮುಖ್ಯ ರಸ್ತೆ ಅಭಿವೃದ್ಧಿಗೆ 2018-19ನೇ ಸಾಲಿನಲ್ಲಿ 25 ಲಕ್ಷ ರೂ. ಮಂಜೂರಾಗಿದೆ. ಈ ರಸ್ತೆ ಒತ್ತುವರಿಯಾಗಿದ್ದು, 18 ಅಡಿಗಳಿಗೆ ವಿಸ್ತರಿಸಿ ಅಭಿವೃದ್ಧಿ ಮಾಡಬೇಕಿದ್ದ ರಸ್ತೆಯನ್ನು ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಯಾವುದೇ ತೆರವು ಮಾಡದೇ ಕಾಮಗಾರಿ ಮಾಡುತ್ತಿದ್ದಾರೆ.


ಗ್ರಾಮದ ಮುಖ್ಯ ರಸ್ತೆ ಸಂಪೂರ್ಣ ಒತ್ತುವರಿಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಗ್ರಾಮ ಪಂಚಾಯಿತಿ ಪಿಡಿಒ, ತಾಲೂಕು ಪಂಚಾಯಿತಿ ಇಒ ಹಾಗೂ ಕನಕಗಿರಿ ಪೊಲೀಸ್ ಠಾಣೆಗೆ ದೂರು ನೀಡಿದರೂ ಯಾವುದೇ ಕ್ರಮಕ್ಕೆ ಅಧಿಕಾರಿಗಳು ಮುಂದಾಗಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.