ಕೊಪ್ಪಳ: ಅಹಿಂದ ಹೆಸರು ಹೇಳಿಕೊಂಡು ಸಿಎಂ ಆದ ಸಿದ್ದರಾಮಯ್ಯ ಈಗ, 'ಅ' ಬಿಟ್ಟು ಹಿಂದ ಹಿಡಿದಿದ್ದಾರೆ. ಮುಂದೆ ಅದರಲ್ಲೂ ಮತ್ತೊಂದನ್ನು ಬಿಟ್ಟು ರಾಜಕೀಯ ಮಾಡುವ ಸ್ವಾರ್ಥ ರಾಜಕಾರಣಿ ಎಂದು ಕುರುಬ ಸಮುದಾಯದ ಎಸ್ಟಿ ಸೇರ್ಪಡೆ ಹೋರಾಟ ಸಮಿತಿ ಅಧ್ಯಕ್ಷ ಕೆ. ವಿರುಪಾಕ್ಷಪ್ಪ ಟೀಕಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ತಮ್ಮ ಸ್ವಾರ್ಥ ರಾಜಕೀಯಕ್ಕಾಗಿ ಕುರುಬ ಸಮುದಾಯದ ಹೋರಾಟ ನಿರ್ಲಕ್ಷಿಸಿ, ಹಿಂದುಳಿದ ವರ್ಗಗಳ ಮನವೊಲಿಕೆಗೆ ಮುಂದಾಗಿದ್ದಾರೆ. ಅವರು ಮುಖ್ಯಮಂತ್ರಿಯಾಗಿದ್ದಾಗಲೂ ಸಹ ನಮ್ಮ ಕುರುಬ ಸಮುದಾಯ ಸೇರಿದಂತೆ ಅಹಿಂದ ವರ್ಗಗಳಿಗೆ ಏನೂ ಮಾಡಲಿಲ್ಲ. ತಮ್ಮ ಅಸ್ತಿತ್ವ ಉಳಿಸಿಕೊಳ್ಳಲು ಹಿಂದುಳಿದ ವರ್ಗಗಳ ಓಲೈಸುವ ಕೆಲಸ ಮಾಡುತ್ತಿದ್ದಾರೆ.
ನಮ್ಮ ಸಮುದಾಯದ ಗುರುಗಳ ನೇತೃತ್ವದಲ್ಲಿ ಎಸ್ಟಿ ಮೀಸಲಾತಿ ಹೋರಾಟ ನಡೆದಿದೆ. ರಾಜಕೀಯಕ್ಕಾಗಿ ಈ ಹೋರಾಟ ಎಂಬ ಹೇಳಿಕೆ ನೀಡುತ್ತಿದ್ದಾರೆ. ಸ್ವಾಮೀಜಿಗಳೇನು ಪಾರ್ಲಿಮೆಂಟ್ಗೆ, ಅಸೆಂಬ್ಲಿಗೆ ಸ್ಪರ್ಧಿಸುತ್ತಾರಾ. ನಮ್ಮ ಹೋರಾಟಕ್ಕೆ ರಾಜಕೀಯ ಲೇಪನ ಮಾಡುವುದು ಸರಿಯಲ್ಲ. ಒಂದು ವೇಳೆ ಸಿದ್ದರಾಮಯ್ಯ ಈ ಬಾರಿ ಕೊಪ್ಪಳದಲ್ಲಿ ಸ್ಪರ್ಧಿಸಿದರೆ, ನಾನೇ ಅವರ ಎದುರಾಳಿಯಾಗಿ ಸ್ಪರ್ಧಿಸುತ್ತೇನೆ ಎಂದರು.
ಓದಿ: ಚೆಂಡಿನಂತೆ ಮತ್ತೆ ಪುಟಿದೇಳುವ ಶಕ್ತಿ ನನಗಿದೆ; ಸಚಿವ ಶ್ರೀರಾಮುಲು
ಇನ್ನು, ಸಮಾಜದಲ್ಲಿನ ಎಲ್ಲ ಹಿಂದುಳಿದ ವರ್ಗಗಳಿಗೂ ನ್ಯಾಯ ಸಿಗಬೇಕು ಎಂಬುದಕ್ಕೆ ನಮ್ಮ ವಿರೋಧವಿಲ್ಲ. ಕುರುಬ ಸಮುದಾಯಕ್ಕೆ ಎಸ್ಟಿ ಮೀಸಲಾತಿ ನೀಡಬೇಕು ಎಂದು ನಡೆದ ನಮ್ಮ ಹೋರಾಟಕ್ಕೆ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದೆ. ಫೆ. 7 ರಂದು ನಡೆದ ಸಮಾವೇಶ ಸರ್ಕಾರದ ಗಮನ ಸೆಳೆದಿದೆ. ಸಿಎಂ ಅವರು ಮಾತುಕತೆಗೆ ಕರೆದಿದ್ದಾರೆ. ನಮ್ಮ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವ ವಿಶ್ವಾಸವಿದೆ ಎಂದು ಹೇಳಿದರು.