ಕುಷ್ಟಗಿ (ಕೊಪ್ಪಳ): ರಾಜ್ಯ ಸರ್ಕಾರ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡಿರುವುದನ್ನು ಖಂಡಿಸಿ ಜೆಡಿಎಸ್ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ, ನಂತರ ತಹಶೀಲ್ದಾರ್ ಎಂ.ಸಿದ್ದೇಶ ಅವರಿಗೆ ಮನವಿ ಸಲ್ಲಿಸಲಾಯಿತು.
ಜೆಡಿಎಸ್ ಜಿಲ್ಲಾ ಅಧ್ಯಕ್ಷ ಅಮರೇಗೌಡ ಎ. ಪಾಟೀಲ್, ತಾಲೂಕು ಅಧ್ಯಕ್ಷ ಬಸವರಾಜ್ ನಾಯಕ್ ಮಾತನಾಡಿ, ಸರ್ಕಾರ ಜಾರಿಗೊಳಿಸಿದ ಭೂ ಸುಧಾರಣೆ ಕಾಯ್ದೆಯಿಂದ ಸಣ್ಣ, ಅತಿಸಣ್ಣ ರೈತರು ಭೂಮಿ ಕಳೆದುಕೊಳ್ಳಲಿದ್ದಾರೆ. ಇದು ರೈತಾಪಿ ವರ್ಗಕ್ಕೆ ಮರಣ ಶಾಸನವಾಗಲಿದೆ. ಭೂ ದಲ್ಲಾಳಿಗಳು ಹಾಗೂ ರಿಯಲ್ ಎಸ್ಟೇಟ್ ಉದ್ಯಮಿಗಳು ರೈತರಿಗೆ ಹಣದ ಆಮಿಷ ತೋರಿಸಿ, ರೈತರ ಜಮೀನು ಕಬಳಿಸುವ ಸಂಭವವಿದೆ. ಸರ್ಕಾರ ಕೂಡಲೇ ಭೂ ಸುಧಾರಣಾ ಕಾಯ್ದೆಯನ್ನು ಕೈ ಬಿಡಬೇಕು ಎಂದು ಒತ್ತಾಯಿಸಿದರು.
ಈ ವೇಳೆ, ಬಸವರಾಜ ಹೊಸೂರು, ಕಳಕಪ್ಪ ಇಲಕಲ್, ಕಲ್ಲನಗೌಡ ಕಬ್ಬರಗಿ, ಕಳಕಪ್ಪ ಉಂಡಿ, ರಾಮಪ್ಪ ಗೊಲ್ಲರ್, ಶಶಿಧರ ಕುಂಬಾರ, ನಾಗರಾಜ್ ನಾಯಕ್ ಮತ್ತಿತರರು ಉಪಸ್ಥಿತರಿದ್ದರು.