ಗಂಗಾವತಿ (ಕೊಪ್ಪಳ): ಕಳೆದ ಹತ್ತು ದಿನಗಳಿಂದ ಕ್ಷೇತ್ರದಿಂದ ದೂರ ಉಳಿದಿದ್ದ ರೆಡ್ಡಿ ಬುಧವಾರದಿಂದ ಮತ್ತೆ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ಕೈಗೊಂಡಿದ್ದು, ಗಂಗಾವತಿ ವಿಧಾನಸಭಾ ಕ್ಷೇತ್ರದ ಬಸಾಪಟ್ಟಣ ಹೋಬಳಿಯ ಹತ್ತಾರು ಗ್ರಾಮಗಳಲ್ಲಿ ಮಿಂಚಿನ ಸಂಚಾರ ಕೈಗೊಂಡರು. ತಾಲೂಕಿನ ಗ್ರಾಮೀಣ ಭಾಗದ ನಾನಾ ಗ್ರಾಮಗಳಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕೆಆರ್ಪಿಪಿ ಪಕ್ಷದ ಜನಾರ್ದನರೆಡ್ಡಿ ನಡೆ ಗ್ರಾಮೀಣ ಅಭಿವೃದ್ಧಿ ಕಡೆ ಅಭಿಯಾನದಲ್ಲಿ, 'ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ, ರಾಜ್ಯದಲ್ಲಿ ಪದವಿ ಪೂರೈಸಿದ ಬಳಿಕ ಉದ್ಯೋಗವಿಲ್ಲದೇ ಪರದಾಡುವ ನಿರುದ್ಯೋಗಿ ಯುವಕರಿಗೆ ಉದ್ಯೋಗ ಸಿಗುವವರೆಗೂ ಮಾಸಿಕ 2500 ಆರ್ಥಿಕ ನೆರವು ನೀಡುವ ಯೋಜನೆ ರೂಪಿಸಲಾಗಿದೆ ಎಂದು ಜನಾರ್ದರೆಡ್ಡಿ ಭರವಸೆ ನೀಡಿದರು.
ಈ ಬಗ್ಗೆ ಘೋಷಣೆ ಮಾಡಿದ ರೆಡ್ಡಿ, ನಿರುದ್ಯೋಗಿ ಯುವಕರನ್ನು ಪಕ್ಷದತ್ತ ಸೆಳೆಯುವ ತಂತ್ರ ರೂಪಿಸಿದರು. ನೂತನ ಪಕ್ಷ ಕಟ್ಟಿರುವ ಪ್ರಥಮ ಚುನಾವಣೆಗೆ ಎದುರಿಸುತ್ತಿರುವ ರೆಡ್ಡಿ ಭರಪೂರ ಭರವಸೆಗಳನ್ನು ಸರ್ಕಾರ ಬಂದರೆ ನೀಡುವುದಾಗಿ ಪ್ರಚಾರದ ವೇಳೆ ಘೋಷಿಸಿದರು. ರೈತರಿಗೆ 15 ಸಾವಿರ ನೀಡುವ ಯೋಜನೆ, ಮಕ್ಕಳ ಶಿಕ್ಷಣಕ್ಕೆ ಪೋಷಕರಿಗೆ ನೆರವಾಗಲು ಹಣ ಮುಂತಾದ ಭರವಸೆಗಳನ್ನು ತಮ್ಮ ಕ್ಷೇತ್ರದ ಜನತೆ ಮುಂದೆ ಇಟ್ಟರು.
ಗಂಗಾವತಿ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯೂ ಆಗಿರುವ ರೆಡ್ಡಿ, ತಮ್ಮ ಪಕ್ಷ ಅಧಿಕಾರಕ್ಕೆ ಬಂದಲ್ಲಿ ಕ್ಷೇತ್ರದ ಜನಸಾಮಾನ್ಯರಿಗೆ ಪೂರಕವಾಗಲಿ ಎಂಬ ಕಾರಣಕ್ಕೆ ಬಸವೇಶ್ವರ ಆರೋಗ್ಯಶ್ರೀ ಯೋಜನೆ ರೂಪಿಸಲಾಗಿದೆ. ಈ ಯೋಜನೆಯಲ್ಲಿ ಒಂದು ಲಕ್ಷದಿಂದ ಹತ್ತು ಲಕ್ಷ ಮೊತ್ತದವರೆಗೂ ಉಚಿತ ವೈದ್ಯಕೀಯ ಸೇವೆ ನೀಡಲಾಗುವುದು ಎಂದು ಘೋಷಿಸಿದರು.
ಕೃಷಿ ಕ್ಷೇತ್ರದ ಅಭಿವೃದ್ಧಿಗೆ ನಾನಾ ಭರವಸೆ: ಕೃಷಿ ಕ್ಷೇತ್ರದ ಅಭಿವೃದ್ಧಿಗೆ ಮತ್ತು ರೈತರರಲ್ಲಿ ಭರವಸೆ ಮೂಡಿಸುವ ಉದ್ದೇಶಕ್ಕೆ ವಾರ್ಷಿಕ 15 ಸಾವಿರ ಸಹಾಯಧನವನ್ನು ನೇರವಾಗಿ ರೈತರ ಖಾತೆಗೆ ಜಮೆ ಮಾಡಲಾಗುವುದು. ಪ್ರತಿ ಗ್ರಾಮದಲ್ಲಿ ರೈತ ಭರವಸೆ ಕೇಂದ್ರ ನಿರ್ಮಾಣ ಮಾಡಿ ರೈತರಿಗೆ ಬೀಜ, ಗೊಬ್ಬರ, ಕೃಷಿಗೆ ಬಳಸುವ ಸಲಕರಣೆಗಳು ಮನೆ ಬಾಗಿಲಿಗೆ ತಲುಪಿಸುವ ಯೋಜನೆ ರೂಪಿಸಲಾಗಿದೆ ಎಂದು ರೆಡ್ಡಿ ಹೇಳಿದರು.
ಶಿಕ್ಷಣ ವೆಚ್ಚ ಭರಿಸುವ ಭರವಸೆ: ಕನಕಗಿರಿ ಬಳಿ ನವಲಿಯಲ್ಲಿ ತುಂಗಭದ್ರಾ ಕಾಲುವೆಗೆ ಸಮಾನಾಂತರ ಜಲಾಶಯ ನಿರ್ಮಾಣ ಮಾಡಿ 32 ಟಿಎಂಸಿ ಸಾಮರ್ಥ್ಯದಷ್ಟು ನೀರು ಸಂಗ್ರಹಣೆ ಮಾಡಲಾಗುವುದು. ಈ ಮೂಲಕ ಕ್ಷೇತ್ರದ ಎಲ್ಲ ಕೃಷಿ ಭೂಮಿಯನ್ನು ನೀರಾವರಿ ಯನ್ನಾಗಿಸುವುದು ನಮ್ಮ ಪಕ್ಷದ ಗುರಿ. ಮಕ್ಕಳ ಶಿಕ್ಷಣ ಉತ್ತೇಜಿಸುವ ಉದ್ದೇಶಕ್ಕೆ 1ರಿಂದ 10ನೇ ತರಗತಿವರೆಗಿನ ವೆಚ್ಚವನ್ನು ಪಾಲಕರ ಅಕೌಂಟಿಗೆ ನೇರವಾಗಿ ಹಾಕುವುದು, ಸರ್ವ ಧರ್ಮಗಳ ಮಧ್ಯೆ ಸಾಮರಸ್ಯ ಮೂಡಿಸುವುದು, ದೇಗುಲಗಳ ಅಭಿವೃದ್ಧಿ ಯೋಜನೆ, ವೃದ್ಧಾಪ್ಯ, ವಿಧವೆ, ಅಂಗವಿಕಲ ವೇತನಗಳಂತ ಸರ್ಕಾರಿ ಸೇವೆಗಳನ್ನು ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದರು.
ದಾಸನಾಳ್, ಉಡಮಕಲ್, ಗಡ್ಡಿ, ಬಂಡ್ರಾಳ್, ಚಿಕ್ಕಬೆಣಕಲ್, ಲಿಂಗದಹಳ್ಳಿ, ಎಚ್.ಆರ್.ಜಿ. ಕ್ಯಾಂಪ್, ಹೇಮಗುಡ್ಡ ಗ್ರಾಮಗಳಲ್ಲಿ ರೆಡ್ಡಿ ಬುಧವಾರ ಪ್ರಚಾರ ನಡೆಸಿದರು. ಪಕ್ಷದ ಜಿಲ್ಲಾ, ತಾಲ್ಲೂಕು ಘಟಕದ ನಾನಾ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇದನ್ನೂ ಓದಿ: ಮಾ.12 ರಂದು ಬೆಂ-ಮೈ ಎಕ್ಸ್‌ಪ್ರೆಸ್ ಹೈವೇ ಪ್ರಧಾನಿಗಳಿಂದ ಉದ್ಘಾಟನೆ: ಪ್ರತಾಪ್ ಸಿಂಹ