ಗಂಗಾವತಿ: ಕೊಪ್ಪಳ ಜಿಲ್ಲೆಯಲ್ಲಿ ಸ್ಪಲ್ಪ ಅಲಕ್ಷ್ಯ ತೋರಿದರೆ, ನೂರಾರು ಪಾಸಿಟಿವ್ ಕೇಸ್ ಆಗಲಿದ್ದು, ಈ ಪೈಕಿ ಕನಿಷ್ಠ ಇಪ್ಪತ್ತು ಜನರ ಪ್ರಾಣಕ್ಕೆ ಕೊರೊನಾ ಸಂಚಕಾರ ತಂದೊಡ್ಡಲಿದೆ ಎಂದು ಸರ್ಕಾರಿ ಉಪ ವಿಭಾಗ ಆಸ್ಪತ್ರೆಯ ಆಡಳಿತಾಧಿಕಾರಿ, ಮುಖ್ಯ ವೈದ್ಯ ಡಾ. ಈಶ್ವರ ಸವಡಿ ಕಳವಳ ವ್ಯಕ್ತಪಡಿಸಿದ್ದಾರೆ.
ನಗರದ ಪೊಲೀಸ್ ಠಾಣೆಯಲ್ಲಿ ನಡೆದ ಕೊರೊನಾ ಮುಂಜಾಗ್ರತಾ ಸಭೆಯಲ್ಲಿ ಮಾತನಾಡಿ, ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಬಿಡುಗಡೆ ಮಾಡಿರುವ ವರದಿ ಪ್ರಕಾರ ಜಿಲ್ಲೆಯಲ್ಲಿ ಅತ್ಯಂತ ಕಳವಳಕಾರಿ ಅಂಶಗಳು ಪತ್ತೆಯಾಗಿವೆ ಎಂದು ಎಚ್ಚರಿಕೆ ನೀಡಿದರು.
ಸಂಸ್ಥೆ ಹತ್ತಾರು ಪಟ್ಟಿಗಳನ್ನು ಬಿಡುಗಡೆ ಮಾಡಿದ್ದು, ಸರಿಯಾದ ಆರೋಗ್ಯ ನಿರ್ವಹಣೆ, ಲಾಕ್ಡೌನ್ ಉಲ್ಲಂಘನೆ, ಅಂತರ ಕಾಯ್ದುಕೊಳ್ಳದೇ ಇದ್ದರೆ ಹೀಗೆ ಇನ್ನೂ ಹಲವಾರು ಅಸಮರ್ಪಕ ಅನುಷ್ಠಾನಗಳಿಂದ ಜಿಲ್ಲೆಗೆ ಕೊರೊನಾ ಮಹಾಮಾರಿ ಹೆಜ್ಜೆ ಇಡಲಿದೆ ಎಂದು ತಿಳಿಸಿದರು.
ಆದ್ದರಿಂದ ಕೊರೊನಾ ವೈರಸ್ ವಿರುದ್ಧ ಹೋರಾಡುವುದು ಪ್ರತಿಯೊಬ್ಬರು ಕರ್ತವ್ಯವಾಗಿದ್ದು, ಸಂಘಟಿತ ಹೋರಾಟ ಮಾತ್ರ ನಮ್ಮನ್ನು ದಡ ಮುಟ್ಟಿಸಲಿದೆ. ಇದುವರೆಗೂ ಕೊಪ್ಪಳ ಗ್ರೀನ್ ಜೋನ್ ಆಗಿದ್ದು ಕೇವಲ ಟ್ರೇಲರ್ ಮಾತ್ರ. ಇನ್ನು ಮುಂದೆ ನಿಜವಾದ ಸಿನಿಮಾ ಓಡಲಿದೆ. ಹೀಗಾಗಿ ಜನರು ಜಾಗ್ರತರಾಗಿರಬೇಕು ಎಂದು ವೈದ್ಯರು ಎಚ್ಚರಿಕೆ ನೀಡಿದರು.