ಕೊಪ್ಪಳ: ನೀರಾವರಿ ಯೋಜನೆಗಳು ಸಮರ್ಪಕವಾಗಿ ಅನುಷ್ಠಾನವಾದರೆ ಮಾತ್ರ ಆ ಪ್ರದೇಶ ಸಮೃದ್ಧಗೊಳ್ಳುವುದರ ಜೊತೆಗೆ ಜನಜೀವನ ಮಟ್ಟವೂ ಸುಧಾರಿಸುತ್ತದೆ. ಆದರೆ ಕೊಪ್ಪಳ ಜಿಲ್ಲೆಯ ಬಹುಪಾಲು ನೀರಾವರಿ ಯೋಜನೆಗಳು ಹೆಸರಿಗೆ ಮಾತ್ರ ಎಂಬಂತಾಗಿದೆ ಎಂದು ಸ್ಥಳೀಯರು ಅಸಮಾಧಾನ ಹೊರಹಾಕಿದ್ದಾರೆ.
ಚಾಲ್ತಿಯಲ್ಲಿರುವ ಕೆಲ ನೀರಾವರಿ ಯೋಜನೆಗಳ ನಿರ್ವಹಣೆಗೆಂದು ಪ್ರತಿ ವರ್ಷವೂ ಲಕ್ಷಾಂತರ ರೂಪಾಯಿ ಹಣ ಬರುತ್ತಿದ್ದರೂ ಸಹ ಆ ಯೋಜನೆಗಳ ವ್ಯಾಪ್ತಿಯ ಬಹುಪಾಲು ರೈತರ ಜಮೀನುಗಳಿಗೆ ಹನಿ ನೀರು ಈವರೆಗೂ ಸಹ ಹರಿದಿಲ್ಲ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಕೊಪ್ಪಳ ಜಿಲ್ಲೆಯಲ್ಲಿರುವ ನೀರಾವರಿ ಯೋಜನಗೆಳಲ್ಲಿ ಬಹುಪಾಲು ಯೋಜನೆಗಳ ಉದ್ದೇಶ ಪೂರ್ಣಗೊಳಿಸುವಲ್ಲಿ ವಿಫಲವಾಗಿವೆ. ತುಂಗಭದ್ರಾ ಜಲಾಶಯದಿಂದ ಕೊಪ್ಪಳ ತಾಲೂಕಿನ ಒಂದಿಷ್ಟು ಪ್ರದೇಶ ಸೇರಿದಂತೆ ಗಂಗಾವತಿ, ಕಾರಟಗಿ ತಾಲೂಕಿನಲ್ಲಿ ನೀರಾವರಿಯಾಗುತ್ತಿದೆ. ಉಳಿದಂತೆ ಜಿಲ್ಲೆಯ ಅನೇಕ ಸಣ್ಣ ಸಣ್ಣ ಏತ ನೀರಾವರಿ ಯೋಜನೆಗಳು ಹಾಗೂ ಮಧ್ಯಮ ನೀರಾವರಿ ಯೋಜನೆಗಳು ಸಂಪೂರ್ಣವಾಗಿ ಅನುಷ್ಠಾನಗೊಳ್ಳದೇ ಹೆಸರಿಗೆ ಮಾತ್ರ ಎಂಬಂತಾಗಿವೆ. ಮುಖ್ಯವಾಗಿ ಕೊಪ್ಪಳ ತಾಲೂಕಿನ ಮುದ್ಲಾಪುರ ಬಳಿಯ ಹಿರೇಹಳ್ಳ ಜಲಾಶಯದಿಂದ ಅಂದುಕೊಂಡ ಉದ್ದೇಶ ಈಡೇರದೇ ವಿಫಲ ಯೋಜನೆಯಾಗಿ ಉಳಿದುಕೊಂಡಿದೆ.
ತುಂಗಭದ್ರಾ ಜಲಾಶಯಕ್ಕೆ ಸೇರುವ ಹೂಳು ತಡೆಗಟ್ಟುವ ಹಾಗೂ ಸುಮಾರು 20 ಸಾವಿರ ಎಕರೆ ಪ್ರದೇಶ ನೀರಾವರಿ ಉದ್ದೇಶದೊಂದಿಗೆ ಹಿರೇಹಳ್ಳ ಜಲಾಶಯ ನಿರ್ಮಾಣ ಕನಸು ಚಿಗುರೊಡೆಯಿತು. ಆರಂಭದಲ್ಲಿ ಸುಮಾರು 6.5 ಕೋಟಿ ರೂಪಾಯಿ ಅಂದಾಜು ವೆಚ್ಚದೊಂದಿಗೆ ಶುರುವಾದ ಈ ಯೋಜನೆ ಈಗ ಬರೋಬ್ಬರಿ 320 ಕೋಟಿ ರೂಪಾಯಿ ಅಧಿಕ ಹಣ ಖರ್ಚಾಗಿದ್ದು, ಉದ್ದೇಶ ಮಾತ್ರ ಇನ್ನೂ ಈಡೇರಿಲ್ಲ. 5 ಗ್ರಾಮಗಳ ಮುಳುಗಡೆ, ಪುನರ್ವಸತಿಯೊಂದಿಗೆ ಸುಮಾರು 2 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯದ ಈ ಕಿರುಜಲಾಶಯವನ್ನು 2001ರಲ್ಲಿ ಅಂದಿನ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಲೋಕಾರ್ಪಣೆ ಮಾಡಿದ್ದರು. ಎಡದಂಡೆ ನಾಲೆಗೆ 37 ಉಪಕಾಲುವೆಗಳು, ಬಲದಂಡೆಗೆ 32 ಉಪಕಾಲುವೆಗಳನ್ನು ಹೊಂದಿದ್ದು ಮುದ್ಲಾಪುರ, ಕಿನ್ನಾಳ, ಮಾದಿನೂರು, ದೇವಲಾಪುರ ಸೇರಿ ಒಂದಿಷ್ಟು ಭಾಗಕ್ಕೆ ಮಾತ್ರ ನೀರು ಹರಿಯುತ್ತದೆ. ಇದರಿಂದ ಒಂದಿಷ್ಟು ಭಾಗ ನೀರಾವರಿಯಾಗುತ್ತದೆ. ಆದರೆ, ಉದ್ದೇಶಿತ ಸುಮಾರು 20 ಸಾವಿರ ಎಕರೆ ಪ್ರದೇಶ ನೀರಾವರಿಯಾಗುವುದು ಇನ್ನೂ ಕನಸಾಗಿಯೇ ಉಳಿದಿದೆ.
ಉಳಿದಂತೆ ಈ ಯೋಜನೆ ವ್ಯಾಪ್ತಿಯ ಚಿಲವಾಡಗಿ, ಓಜನಹಳ್ಳಿ, ಯತ್ನಟ್ಟಿ, ಹಲಗೇರಿ ಸೇರಿದಂತೆ ಅನೇಕ ಗ್ರಾಮಗಳ ಭೂಮಿಗಳು ಇನ್ನೂ ಹನಿ ನೀರು ಕಂಡಿಲ್ಲ. ಅಚ್ಚುಕಟ್ಟು ಪ್ರದೇಶದ ನೀರಾವರಿಗಾಗಿ ಮಾಡಿದ್ದ 8016 ಹೆಕ್ಟೇರ್ ಕ್ಷೇತ್ರದ ಹೊಲ ಗಾಲುವೆಗಳು ಹೇಳ ಹೆಸರಿಲ್ಲದಂತೆ ಹಾಳಾಗಿವೆ. ಉಪಕಾಲುವೆಗಳಲ್ಲಿ ಗಿಡಗಂಟೆಗಳು ಬೆಳೆದು ಕಾಲುವೆಗಳು ಕಾಣದಂತಾಗಿವೆ. ಈ ಯೋಜನೆಯಿಂದ ಅಧಿಕಾರಿಗಳು, ಗುತ್ತಿಗೆದಾರರು ಶ್ರೀಮಂತರಾದರೆ ಹೊರತು ರೈತರ ಜಮೀನುಗಳಿಗೆ ಸಂಪೂರ್ಣವಾಗಿ ಇನ್ನೂ ನೀರು ಹರಿದಿಲ್ಲ ಎನ್ನುವ ಮಾತುಗಳು ಕೇಳಿಬಂದಿವೆ. ನಿರ್ವಹಣೆಗೆ ಸಾಕಷ್ಟು ಹಣ ಬರುತ್ತದೆಯಾದರೂ ಅದು ಉಳ್ಳವರ ಪಾಲಾಗುತ್ತಿದೆ ಆಗುತ್ತಿದೆ ಎಂಬುದು ಹೋರಾಟಗಾರರ ಆರೋಪ.
ಈ ಸುದ್ದಿಯನ್ನೂ ಓದಿ: ಮಹದಾಯಿಗೆ ಮನಸು ಮಾಡದ ಸರ್ಕಾರ... ಮತ್ತೆ ಮುನ್ನೆಲೆಗೆ ಬಂತು ಪ್ರತ್ಯೇಕ ರಾಜ್ಯದ ಕೂಗು
ಇನ್ನು ಇದರಂತೆ ಮತ್ತೊಂದು ಮಹತ್ವದ ನೀರಾವರಿ ಯೋಜನೆಯಾಗಿರುವ ಸಿಂಗಟಾಲೂರು ಏತ ನೀರಾವರಿ ಯೋಜನೆಯದ್ದು ಮತ್ತೊಂದು ಕಥೆ. ಪರಿಷ್ಕೃತ ಹನಿ ನೀರಾವರಿ ಯೋಜನೆಯಂತೆ ಕೊಪ್ಪಳ ಹಾಗೂ ಕುಕನೂರು ತಾಲೂಕಿನ ಸುಮಾರು 1 ಲಕ್ಷ ಎಕರೆ ಪ್ರದೇಶ ನೀರಾವರಿಯಾಗಬೇಕಿದೆ. ಈ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಬಲದಂಡೆ ನಾಲೆಯ ವ್ಯಾಪ್ತಿಯಲ್ಲಿ ಈಗಾಗಲೇ ನೀರಾವರಿಯಾಗಿದೆ. ಆದರೆ, ಎಡದಂಡೆ ವ್ಯಾಪ್ತಿಗೆ ಬರುವ ಕೊಪ್ಪಳ ಜಿಲ್ಲೆಯ ವ್ಯಾಪ್ತಿಯಲ್ಲಿ ಕಾಮಗಾರಿ ಇನ್ನೂ ಕುಂಟುತ್ತಾ ಸಾಗಿದೆ. ಕೃಷ್ಣಾ ಬಿ ಸ್ಕೀಂ ಯೋಜನೆಯ ಹಣೆಬರಹವೂ ಇದಕ್ಕೆ ಹೊರತಾಗಿಲ್ಲ.
ಪಕ್ಕದಲ್ಲಿಯೇ ತುಂಗಭದ್ರಾ ನದಿ ಇದ್ದರೂ ಸಹ ಕೊಪ್ಪಳ ಜಿಲ್ಲೆಯ ಅನೇಕ ನೀರಾವರಿ ಯೋಜನೆಗಳು ಇನ್ನೂ ನನೆಗುದಿಗೆ ಬಿದ್ದಿದೆ. ಅಸ್ತಿತ್ವದಲ್ಲಿರುವ ಕೆಲ ನೀರಾವರಿ ಯೋಜನೆಗಳ ನಿರ್ವಹಣೆಗೆ ಸರ್ಕಾರ ಪ್ರತಿವರ್ಷ ಹಣ ನೀಡುತ್ತಿದೆ. ಆದರೆ, ಯೋಜನೆಯ ಉದ್ದೇಶಗಳು ಮಾತ್ರ ಸಂಪೂರ್ಣವಾಗದೇ ಇರೋದು ವಿಪರ್ಯಾಸ.