ಗಂಗಾವತಿ: ರೈತರು ಆರ್ಥಿಕವಾಗಿ ಸಂಕಷ್ಟಕ್ಕೀಡಾಗಿ ಆತ್ಮಹತ್ಯೆಯಂತಹ ಹಾದಿ ಹಿಡಿಯಲಿ ಎಂದು ಪರೋಕ್ಷವಾಗಿ ನೀರಾವರಿ ಇಲಾಖೆಯ ಅಧಿಕಾರಿಗಳು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ರೆಡ್ಡಿ ಶ್ರೀನಿವಾಸ ಆರೋಪಿಸಿದ್ದಾರೆ.
ತಾಲೂಕಿನ ಚಿಕ್ಕಜಂತಕಲ್ ಬಳಿ ಇರುವ ತುಂಗಭದ್ರಾ ನದಿಗೆ ರೈತರ ನಿಯೋಗದೊಂದಿಗೆ ಭೇಟಿ ನೀಡಿದ ಅವರು, ನದಿಗೆ ಹರಿಸುತ್ತಿರುವ ನೀರಿನ ಪ್ರಮಾಣವನ್ನು ಪರಿಶೀಲಿಸಿದರು. ಬಳಿಕ ಮಾತನಾಡಿ, ನದಿಗೆ ಇಷ್ಟು ಪ್ರಮಾಣದ ನೀರು ಹರಿಸುವ ಅಗತ್ಯ ಇಲ್ಲ.
ಆದರೆ, ತುಂಗಭದ್ರಾ ಎಡದಂಡೆ ಕಾಲುವೆಯ ವ್ಯಾಪ್ತಿಯಲ್ಲಿ ರೈತರು ಬೆಳೆದಿರುವ ಭತ್ತದ ಬೆಳೆಗೆ ಏಪ್ರಿಲ್ ಅಂತ್ಯದವರೆಗೂ ನೀರಿನ ಅಗತ್ಯವಿದೆ. ಆದರೆ, ಕಾಲುವೆಗಳಿಗೆ ಮಾರ್ಚ್ ಅಂತ್ಯದವರೆಗೆ ಮಾತ್ರ ನೀರು ಹರಿಸುತ್ತೇವೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.
ಇದನ್ನೂ ಓದಿ: ವಿಧಾನಸಭೆಯಲ್ಲಿ ಮುಂದುವರಿದ ಧರಣಿ : ಸ್ಪೀಕರ್ ಕಚೇರಿಯಲ್ಲಿ ಸಂಧಾನ ಸಭೆ
ಆದರೆ, ಅಗತ್ಯಕ್ಕಿಂತ ಹೆಚ್ಚಾಗಿ ನದಿಗೆ ನಿತ್ಯ ಐದರಿಂದ ಆರು ಸಾವಿರ ಕ್ಯೂಸೆಕ್ ನೀರು ಹರಿಸುವ ಮೂಲಕ ಜಲಾಶಯದಲ್ಲಿನ ನೀರು ಕಾಲಿ ಮಾಡಿ ಎಡದಂಡೆ ನಾಲೆಯ ರೈತರಿಗೆ ಅನ್ಯಾಯ ಮಾಡಲು ಅಧಿಕಾರಿಗಳು ಯತ್ನಿಸುತ್ತಿದ್ದಾರೆ ಎಂದು ರೆಡ್ಡಿ ಶ್ರೀನಿವಾಸ ಆರೋಪಿಸಿದರು.
ಸದ್ಯಕ್ಕೆ ಜಲಾಶಯದಲ್ಲಿರುವ ನೀರಿನ್ನು ನಿಗದಿತ ಪ್ರಮಾಣಕ್ಕೆ ನದಿಗೆ ಹರಿಸಿದರೆ ಎಡದಂಡೆ ನಾಲೆಯ ರೈತರು ಬೆಳೆ ಹಾನಿಯಿಂದ ಪಾರಾಗಬಹುದಿತ್ತು. ಆದರೆ, ಕಳೆದ ಒಂದು ತಿಂಗಳಿಂದ ಹೆಚ್ಚುವರಿ ನೀರು ಹರಿಸುವ ಮೂಲಕ ಜಲಾಶಯವನ್ನು ಬರಿದು ಮಾಡುವ ಹುನ್ನಾರ ನಡೆದಿದೆ ಎಂದು ಶ್ರೀನಿವಾಸ ಆರೋಪಿಸಿದರು.