ಕುಷ್ಟಗಿ (ಕೊಪ್ಪಳ) : ಪಟ್ಟಣದಲ್ಲಿ ಐಪಿಎಲ್ ಕ್ರಿಕೆಟ್ ದಂಧೆ ನಡೆಸುತ್ತಿದ್ದ ಸ್ಥಳಗಳ ಮೇಲೆ ಕುಷ್ಟಗಿ ಪೊಲೀಸರು ದಾಳಿ ನಡೆಸಿದ್ದು, ಪ್ರತ್ಯೇಕ ಪ್ರಕರಣಗಳಿಗೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸದ್ದಾಂ ಖಾಸೀಂಸಾಬ್ ಗುಮಗೇರಿ, ಅನಂತ ಗುಂಡಪ್ಪ ಬಸಾಪೂರ ಬಂಧಿತ ಆರೋಪಿಗಳು. ಇವರು ನಗರದ ಬಸವರಾಜ ಚಿತ್ರಮಂದಿರ ಬಳಿ ಸೇರಿ ಬೆಟ್ಟಿಂಗ್ ನಡೆಸುತ್ತಿದ್ದರು.
ಈ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು, ಪಿಎಸ್ ಐ ಚಿತ್ತರಂಜನ್ ನಾಯಕ್ ಹಾಗೂ ಸಿಬ್ಬಂದಿ ದಾಳಿ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಈ ವೇಳೆ ಓರ್ವ ಆರೋಪಿ ಪರಾರಿಯಾಗಿದ್ದಾನೆ. ಬಂಧಿತರಿಂದ ಮೂರು ಮೊಬೈಲ್ ಒಟ್ಟು 11,650 ರೂ ನಗದನ್ನು ಜಪ್ತಿ ಮಾಡಲಾಗಿದೆ.
ಇನ್ನೊಂದು ಪ್ರಕರಣದಲ್ಲಿ ಪಟ್ಟಣದ ಚನ್ನಬಸವೇಶ್ವರ ವೃತ್ತದಲ್ಲಿ ಐಪಿಎಲ್ ಟಿ-20 ಡೆಲ್ಲಿ ಕ್ಯಾಪಿಟಲ್ಸ್ ಮತ್ತು ರಾಜಸ್ಥಾನ ರಾಯಲ್ಸ್ ನಡುವಿನ ಪಂದ್ಯದ ನೇರ ಪ್ರಸಾರದ ವೇಳೆ ಕೆಲವರು ಬೆಟ್ಟಿಂಗ್‌ನಲ್ಲಿ ನಿರತರಾಗಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು, ಆರೋಪಿಗಳಾದ ಶಿವಪ್ಪ ಬಸಲಿಂಗಪ್ಪ ನಾಯಕವಾಡಿ, ಮುತ್ತಪ್ಪ ಚನ್ನಪ್ಪ ಕೆಂಗಲ್ ಎಂಬುವವರನ್ನು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಪರಪ್ಪ ನಾಯಕವಾಡಿ ಎಂಬುವವನು ಪರಾರಿಯಾಗಿದ್ದಾನೆ.
ಆರೋಪಿಗಳಿಂದ 1,420 ರೂ. ನಗದು, ಒಂದು ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಈ ಎರಡು ಪ್ರಕರಣಗಳು ಕುಷ್ಟಗಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.