ಕೊಪ್ಪಳ : ಉದ್ಯೋಗ ಖಾತ್ರಿ ಯೋಜನೆಯ ಪರಿಣಾಮದಿಂದಾಗಿ ಜಿಲ್ಲೆಯಲ್ಲಿ ಕೃಷಿ ಚಟುವಟಿಕೆಗಳಿಗೆ ಕಾರ್ಮಿಕರು ಸಿಗದೆ ಪರದಾಡುವಂತಾಗಿದೆ ಎಂದು ರೈತರು ಬೇಸರ ವ್ಯಕ್ತಪಡಿಸಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯು ದುಡಿಯುವ ಕೈಗಳಿಗೆ ಕೆಲಸ ನೀಡುವ ಅತ್ಯಂತ ಮಹತ್ವದ ಯೋಜನೆ. ಇದರಿಂದ ಅದೆಷ್ಟೋ ಕುಟುಂಬಗಳಿಗೆ ಆಸರೆಯೂ ಆಗಿದೆ. ಆದರೆ, ಈ ಯೋಜನೆ ಈಗ ರೈತಾಪಿ ವರ್ಗಕ್ಕೆ ಕೊಂಚ ಅಡಚಣೆ ಮಾಡಿ ರೈತರನ್ನು ಪರದಾಡುವಂತೆ ಮಾಡಿದೆ.
ಜಿಲ್ಲೆಯಲ್ಲಿ ಶೇಂಗಾ ಒಕ್ಕಣೆ ಸೇರಿ ಅನೇಕ ಕೃಷಿ ಚಟುವಟಿಕೆಗಳು ನಡೆದಿವೆ. ಕೃಷಿಯಲ್ಲಿ ಒಂದಿಲ್ಲೊಂದು ಕೆಲಸಕ್ಕೆ ಕೂಲಿಕಾರ್ಮಿಕರ ಅವಶ್ಯಕತೆ ಇದ್ದೇ ಇರುತ್ತದೆ. ಆದರೆ, ಇದೀಗ ಉದ್ಯೋಗ ಖಾತ್ರಿಗೆ ಅವಲಂಬಿತರಾಗಿರುವ ಕೂಲಿ ಕಾರ್ಮಿಕರು, ರೈತರ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ.
ಕೃಷಿ ಚಟುವಟಿಕೆಯಲ್ಲಿ ಕೆಲಸ ಮಾಡಿದರೆ 200 ರೂ. ಕೂಲಿ ನೀಡಲಾಗುತ್ತಿದೆ. ಆದರೆ, ಉದ್ಯೋಗ ಖಾತ್ರಿ ಯೋಜನೆಯಲ್ಲಿ ದಿನಕ್ಕೆ 284 ರೂ. ನೀಡಲಾಗುತ್ತದೆ. ಅಲ್ಲದೆ ಕೆಲಸವೂ ಕಡಿಮೆ ಇರುತ್ತೆ. ಬೆಳಗ್ಗೆ ಹೋಗಿ 11 ಗಂಟೆಯೊಳಗೆ ಮನೆಗೆ ವಾಪಸ್ ಬರುತ್ತಾರೆ.
ಉದ್ಯೋಗ ಖಾತ್ರಿ ಯೋಜನೆಯಲ್ಲಿ ನೀಡುವ ಕೂಲಿಯನ್ನು ರೈತರು ಹೇಗೆ ಕೊಡಲು ಸಾಧ್ಯ. ಬೀಜ, ಗೊಬ್ಬರ ಹಾಗೂ ಬೆಳೆಯ ನಿರ್ವಹಣಾ ವೆಚ್ಚ ಹೆಚ್ಚಾಗಿದೆ. ಹೀಗಾಗಿ, ಕೃಷಿ ಮಾಡುವುದು ಸಾಲವನ್ನು ಮೈಮೇಲೆ ಹೇರಿಕೊಳ್ಳುವಂತಾಗಿದೆ ಎಂದು ರೈತರು ತಮ್ಮ ಅಳಲು ತೋಡಿಕೊಲ್ಳುತ್ತಿದ್ದಾರೆ.