ಗಂಗಾವತಿ(ಕೊಪ್ಪಳ): ಕೊರೊನಾ ಸೋಂಕಿನಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ಜಿಲ್ಲೆಯಲ್ಲಿ ಹಾಗೂ ಗಂಗಾವತಿ ತಾಲೂಕಿನಲ್ಲಿ ಹೆಚ್ಚಾಗುತ್ತಿದೆ. ಸೋಂಕಿತರ ಮರಣದ ಬಳಿಕ ಸಾಕಷ್ಟು ಸಮಸ್ಯೆಗಳು ಎದುರಾಗುತ್ತಿರುವುದರಿಂದ ಜಿಲ್ಲಾಡಳಿತ ಇದೀಗ ಪರ್ಯಾಯ ಮಾರ್ಗವೊಂದನ್ನು ಕಂಡುಕೊಂಡಿದೆ.
ಮರಳಿಯಲ್ಲಿ ಮೃತ ಪಟ್ಟ ಮಹಿಳೆ ಹಾಗೂ ಹಿರೇಜಂತಕಲ್ನಲ್ಲಿ ಸಾವನ್ನಪ್ಪಿದ ವ್ಯಕ್ತಿಯ ಅಂತ್ಯ ಸಂಸ್ಕಾರಕ್ಕೆ ಸ್ಥಳೀಯರು ತೀವ್ರ ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ, ಮೃತರ ಗೌರವಯುತ ಅಂತ್ಯ ಸಂಸ್ಕಾರ ಜಿಲ್ಲಾಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.
ಈ ಹಿನ್ನೆಲೆ ತಾಲೂಕಿನಲ್ಲಿ ನಡೆದ ಎರಡು ಘಟನೆಗಳ ಮಾಹಿತಿಯೊಂದಿಗೆ ಜಿಲ್ಲಾಧಿಕಾರಿ ಬಳಿಗೆ ತೆರಳಿದ ಕಂದಾಯ, ಆರೋಗ್ಯ ಹಾಗೂ ಪೊಲೀಸ್ ಅಧಿಕಾರಿಗಳ ತಂಡಕ್ಕೆ, ಪರ್ಯಾಯ ಮಾರ್ಗವೊಂದನ್ನು ಜಿಲ್ಲಾಧಿಕಾರಿ ಸುರಾಲ್ಕರ್ ವಿಕಾಸ ಕಿಶೋರ್ ಸೂಚಿಸಿದ್ದಾರೆ.
ಗಂಗಾವತಿಯಲ್ಲಿ ಐದು ಎಕರೆ ಸರ್ಕಾರಿ ಭೂಮಿಯನ್ನು ಗುರುತಿಸಿ ನಿಗದಿಪಡಿಸುವುದು, ಅಲ್ಲಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದವರ ಅಂತ್ಯ ಸಂಸ್ಕಾರ ಮಾಡುವಂತೆ ಸಲಹೆ ನೀಡಿದ್ದಾರೆ.
ಸೋಂಕಿನಿಂದ ಸಾವನ್ನಪ್ಪಿದವರ ಮೃತದೇಹವನ್ನು ಆಯಾ ಗ್ರಾಮಕ್ಕೆ ತೆಗೆದುಕೊಂಡು ಹೋಗಬೇಕು. ಕುಟುಂಬದವರು ಪಾರ್ಥಿವ ಶರೀರ ಪಡೆಯಲು ನಿರಾಕರಿಸಿದರೆ ಅಥವಾ ಗ್ರಾಮಸ್ಥರು ಅಂತ್ಯ ಸಂಸ್ಕಾರಕ್ಕೆ ವಿರೋಧ ವ್ಯಕ್ತಪಡಿಸಿದರೆ ಅಂತಹ ಸಂದರ್ಭದಲ್ಲಿ ಸರ್ಕಾರಿ ಜಾಗದಲ್ಲಿ ಗೌರವಯುತವಾಗಿ ಅಂತ್ಯ ಸಂಸ್ಕಾರ ನಡೆಸಿ ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ.