ಕೊಪ್ಪಳ: ಜಿಲ್ಲೆಯಲ್ಲಿ ಹಾಲು ಉತ್ಪಾದನೆಯ ಪ್ರಮಾಣ ಕೊಂಚ ಹೆಚ್ಚಳವಾಗಿದ್ದು ಉತ್ಪಾಕರ ಸಹಕಾರ ಸಂಘಗಳಿಗೆ ಈ ಮೊದಲಿಗಿಂತಲೂ ಹಾಲು ಜಾಸ್ತಿ ಬರುತ್ತಿದೆ. ಪರಿಣಾಮ ಒಕ್ಕೂಟದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಸಂಗ್ರಹವಾಗುತ್ತಿದೆ. ಉತ್ಪಾದನೆಯಾಗುತ್ತಿರುವ ಹಾಲು ನುರಿಸಲು ಒಕ್ಕೂಟಕ್ಕೆ ಕಷ್ಟವಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿವೆ.
ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ ಡೌನ್‌ನಿಂದ ಅನೇಕ ಕೈಗಳಿಗೆ ಕೆಲಸವಿಲ್ಲದಾಗಿದೆ. ನಗರದಲ್ಲಿದ್ದ ಕಾರ್ಮಿಕರು ಗ್ರಾಮೀಣ ಪ್ರದೇಶಗಳಿಗೆ ಮರಳಿದ್ದಾರೆ. ಹೀಗೆ ಮರಳಿ ಬಂದವರಲ್ಲಿ ಕೆಲವರು ಹೈನುಗಾರಿಕೆಯಲ್ಲಿ ತೊಡಗಿದ್ದಾರೆ. ಇದರ ಜೊತೆಗೆ ಹೊಟೇಲ್, ಖಾನಾವಳಿ, ಬೇಕರಿಗಳು ಬಂದ್ ಆಗಿವೆ. ಹೊಟೇಲ್, ಖಾನಾವಳಿ ಹಾಗೂ ಬೇಕರಿಗಳಿಗೆ ಹಾಲು ಮಾರಾಟ ಮಾಡುತ್ತಿದ್ದವರೀಗ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಹಾಕುತ್ತಿದ್ದಾರೆ. ಹೀಗಾಗಿ ಜಿಲ್ಲೆಯಲ್ಲಿಯೂ ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಹಾಲು ಸಂಗ್ರಹಣೆ ಈ ಮೊದಲಿಗಿಂತಲೂ ತುಸು ಏರಿಕೆಯಾಗಿದೆ.
"ಕೊರೊನಾ ಸೋಂಕಿನ ಭೀತಿ ಹಾಗೂ ಲಾಕ್ ಡೌನ್ ನಿಂದ ಊರಿಗೆ ಮರಳಿ ಬಂದವರು ಹೈನುಗಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ. ಹೀಗಾಗಿ ಈ ಅವಧಿಯಲ್ಲಿಯೂ ಒಕ್ಕೂಟದಲ್ಲಿ ಹಾಲು ಸಂಗ್ರಹ ಜಾಸ್ತಿಯಾಗಿದೆ" - ರಾ.ಬ.ಕೊ ಹಾಲು ಒಕ್ಕೂಟದ ನಿರ್ದೇಶಕ ವೆಂಕನಗೌಡ ಹಿರೇಗೌಡರ.
ಬರುವ 2.05 ಲಕ್ಷ ಲೀಟರ್ ಹಾಲಿನಲ್ಲಿ ನಿತ್ಯ 1.20 ಲಕ್ಷ ಲೀಟರ್ ಹಾಲು ಮಾರಾಟವಾಗುತ್ತಿದೆ. ಹೊಟೇಲ್ ಗಳು ಬಂದ್ ಇರುವುದರಿಂದ, ಮದುವೆ, ಸಭೆ ಸಮಾರಂಭಗಳು ಸಹ ಇಲ್ಲ. ಇದರಿಂದಾಗಿ ಹಾಲು ಖರ್ಚಾಗುತ್ತಿಲ್ಲ. ಉಳಿದಂತೆ ಮೊಸರು ಹಾಗೂ ಹಾಲಿನ ಪೌಡರ್ ಮಾಡಲಾಗುತ್ತಿದೆ ಎನ್ನುತ್ತಾರೆ ರಾಬಕೊ ಹಾಲು ಒಕ್ಕೂಟದ ಅಧಿಕಾರಿಗಳು.