ಕುಷ್ಟಗಿ: ಪಟ್ಟಣದ ಹೊರವಲಯದಲ್ಲಿ ವಿದ್ಯುತ್ ಸಂಪರ್ಕ ಕಲ್ಪಿಸುವ ತಂತಿ ಜನರ ಕೈಗೆಟುಕುವ ರೀತಿಯಲ್ಲಿ ಜೋತು ಬಿದ್ದಿದ್ದು, ಕೃಷಿಕರು ನಿತ್ಯ ಜೀವ ಕೈಯಲ್ಲಿ ಹಿಡಿದು ಓಡಾಡುವಂತಾಗಿದೆ.
ಜೆಸ್ಕಾಂ ಎಇಇ ಉಪ ವಿಭಾಗಕ್ಕೆ 11 ಕೆವಿ ವಿದ್ಯುತ್ ಮಾರ್ಗಕ್ಕೆ ಸುರಕ್ಷೆಯ ದೃಷ್ಟಿಯಿಂದ ಎರಡು ವಿದ್ಯುತ್ ಕಂಬ ಅಳವಡಿಸುವುದಕ್ಕೆ ಅಡ್ಡಿಯಾಗಿರುವುದೇನು ಎಂಬ ಪ್ರಶ್ನೆ ಮೂಡಿದೆ.
ಪಟ್ಟಣದ ಹೊರವಲಯದ 220 ಕೆವಿ ವಿದ್ಯುತ್ ಪ್ರಸರಣದಿಂದ 11 ಕೆವಿ ಲೈನ್ ದಾಳಿಂಬೆ ಬೆಳೆಗಾರ ವೀರೇಶ ತುರಕಾಣಿ ಎಂಬುವವರ ತೋಟದ ಮೂಲಕ ಹಾದು ಹೋಗಿದೆ. ಅವೈಜ್ಞಾನಿಕವಾಗಿ ವಿದ್ಯುತ್ ಕಂಬಗಳ ಅಳವಡಿಕೆ ಹಿನ್ನೆಲೆಯಲ್ಲಿ ಕಂಬಗಳ ಅಂತರ ಜಾಸ್ತಿಯಾಗಿರುವುದು ವಿದ್ಯುತ್ ತಂತಿ ಕೈಗೆಟಕುವಷ್ಟು ಜೋತು ಬಿದ್ದಿರುವುದು ಅಪಾಯವೆನಿಸಿದೆ. ಬೇಸಿಗೆಯಲ್ಲಿ ತಂತಿಗಳು ಇನ್ನಷ್ಟು ಕೆಳಗೆ ಜೋತು ಬಿದ್ದಿದ್ದು, ಮಳೆಗಾಲದ ಬಿರುಗಾಳಿ ಸಂದರ್ಭದಲ್ಲಿ ಇಲ್ಲಿ ಕಾಲಿಡಲು ಭಯ ಪಡುವಂತಾಗಿದೆ. ಈ ಅಪಾಯಕಾರಿ ಸ್ಥಳದಲ್ಲಿ ಮತ್ತೆರೆಡು ವಿದ್ಯುತ್ ಕಂಬ ಅಳವಡಿಸಿದರೆ ಪರಿಹಾರ ಸಾಧ್ಯವಿದೆ.
ಆದರೆ ಕೂಗಳತೆಯ ದೂರದಲ್ಲಿ 220 ಕೆವಿ ಸ್ಟೇಷನ್ ಇದ್ದಾಗ್ಯೂ ಕ್ರಮ ಕೈಗೊಂಡಿಲ್ಲ. ಈ ಸ್ಥಳದಲ್ಲಿ ದಾಳಿಂಬೆ ಬೆಳೆಗೆ ಕ್ರಿಮಿನಾಶಕ, ಕಳೆ ತೆಗೆಯಲು ಇತ್ಯಾದಿ ಕೆಲಸಗಳಿಗೆ ಕೂಲಿಕಾರರು ಹಿಂಜರಿಯುತ್ತಿದ್ದಾರೆ. ರೈತ ವೀರೇಶ ತುರಕಾಣಿ ಅವರು, ಹಲವು ಬಾರಿ ದೂರು ನೀಡಿದಾಗೊಮ್ಮೆ ಸ್ಥಳ ಪರಿಶೀಲಿಸಿದ್ದು, ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿದ್ಯುತ್ ಮಾರ್ಗ ಸ್ಥಳಾಂತರಿಸಿ ಎಂದು ಹೇಳುತ್ತಿಲ್ಲ. ಬದಲಿಗೆ ಮತ್ತೆರಡು ಕಂಬಗಳನ್ನು ಅಳವಡಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಹೇಳಿದರೂ ಯಾವುದೇ ಪ್ರಯೋಜನವಾಗಿಲ್ಲ ಎನ್ನಲಾಗಿದೆ.