ಕೊಪ್ಪಳ: ನಾನು ಕುರುಬ ಅಲ್ಲ, ಅದಕ್ಕೂ ಮೊದಲು ನಾನೊಬ್ಬ ಹಿಂದು. ಸಿದ್ದರಾಮಯ್ಯ ಕುರುಬರ ನಾಯಕ ಅಲ್ಲ. ಅವರೊಬ್ಬ ಜಾತಿವಾದಿ ಎಂದು ಹೇಳಿಕೆ ನೀಡುವ ಮೂಲಕ ಕೆ.ಎಸ್. ಈಶ್ವರಪ್ಪ ಸಿದ್ದರಾಮಯ್ಯ ಅವರನ್ನು ಟೀಕಿಸಿದ್ದಾರೆ.
ಸಿದ್ದರಾಮಯ್ಯ ಅವರ ಮೈಯಲ್ಲಿ ಜಾತಿವಾದದ ರಕ್ತ ಹರಿಯುತ್ತಿದೆ. ಅವರ ಮೈಯಲ್ಲಿ ಕನಕದಾಸ, ಸಂಗೊಳ್ಳಿ ರಾಯಣ್ಣರ ರಕ್ತ ಹರಿಯುತ್ತಿಲ್ಲ. ಮುಂಬರುವ ದಿನದಲ್ಲಿ ಕುರುಬರನ್ನು ಸಿದ್ದರಾಮಯ್ಯ ದೂರ ತಳ್ಳುತ್ತಾರೆ. ಇನ್ನು ಆದಾಯ ತೆರಿಗೆ ಇಲಾಖೆ ದಾಳಿಯನ್ನು ಸಿಎಂ ಗೌಪ್ಯವಾಗಿಡದೇ ಬಹಿರಂಗ ಮಾಡಿದ್ದಾರೆ. ಹೀಗೆ ಬಹಿರಂಗ ಮಾಡಿದ ಕುಮಾರಸ್ವಾಮಿ ಅಯೋಗ್ಯ. ಗೌಪ್ಯತೆ ಕಾಪಾಡಲು ವಿಫಲವಾದ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದರು.
ಇಲ್ಲವೆ ರಾಜ್ಯಪಾಲರು ಸಿಎಂ ಅವರನ್ನು ಸ್ಥಾನದಿಂದ ಕಿತ್ತು ಬಿಸಾಕಬೇಕು ಎಂದು ಆಗ್ರಹಿಸಿದರು. ಕಾಂಗ್ರೆಸ್ - ಜೆಡಿಎಸ್ ರಾಜ್ಯದಲ್ಲಿ ಸ್ವಾರ್ಥಕ್ಕಾಗಿ ಮೈತ್ರಿ ಮಾಡಿಕೊಂಡಿವೆ. ಸ್ವಾರ್ಥ ರಾಜಕಾರಣದ ವಿರುದ್ಧ ಹೋರಾಟದ ಸಂಕೇತವಾಗಿ ನಾವು ಸುಮಲತಾಗೆ ಬೆಂಬಲ ನೀಡುತ್ತೇವೆ ಎಂದು ಇದೇ ಸಂದರ್ಭದಲ್ಲಿ ಹೇಳಿದ್ರು.
ಯುಪಿಎ ಅಧಿಕಾರಕ್ಕೆ ಬಂದರೆ ಜನರಿಗೆ 72 ಸಾವಿರ ರೂ. ಹಣ ಹಾಕುವ ರಾಹುಲ್ ಹೇಳಿಕೆ ವಿಚಾರ ಕುರಿತಂತೆ ಪ್ರತಿಕ್ರಿಯಿಸಿದ ಈಶ್ವರಪ್ಪ, ರಾಹುಲ್ ಗಾಂಧಿಗೆ ಲೆಕ್ಕಾನೇ ಗೊತ್ತಿಲ್ಲ. ಅಷ್ಟೊಂದು ಹಣ ಎಲ್ಲಿಂದ ತರುತ್ತಾರೆ ಎಂದು ಪ್ರಶ್ನಿಸಿದ ಅವರು, ರಾಹುಲ್ ಗಾಂಧಿ, ಸಿದ್ದರಾಮಯ್ಯ ಸುಳ್ಳಿನ ಸರದಾರರು ಎಂದು ವಾಗ್ದಾಳಿ ನಡೆಸಿದರು.