ಗಂಗಾವತಿ: ವಿಶ್ವ ಪರಂಪರೆಯ ಯುನೆಸ್ಕೋ ಪಟ್ಟಿಯಲ್ಲಿರುವ ಸಂರಕ್ಷಿತ ಹಂಪಿ ಮಹಾಯೋಜನೆಯ ಪ್ರದೇಶದಲ್ಲಿ ಅನಧಿಕೃತ ಕಲ್ಲು ಗಣಿಗಾರಿಕೆ ಮಾಡುತ್ತಿರುವ ಪ್ರಕರಣ ಬೆಳಕಿಗೆ ಬಂದಿದೆ.
ಹಂಪಿಯ ಜೊತೆಗೆ ಆನೆಗೊಂದಿ ಸುತ್ತಲಿನ ಹನ್ನೊಂದು ಗ್ರಾಮಗಳನ್ನು ಹಂಪಿ ಮಹಾ ಯೋಜನೆಯಲ್ಲಿ ಗುರುತಿಸಿದ್ದು, ಯುನೆಸ್ಕೋ ಷರತ್ತಿನ ಹಿನ್ನೆಲೆ ಈ ಪ್ರದೇಶದಲ್ಲಿ ಮನೆ ನಿರ್ಮಾಣಕ್ಕೂ ಹಂಪಿ ಅಭಿವೃದ್ದಿ ಪ್ರಾಧಿಕಾರ ತಡೆಯೊಡ್ಡಿದೆ. ಆದರೆ ಆನೆಗೊಂದಿ ಹೋಬಳಿಯ ಕಡೆಬಾಗಿಲು, ರಂಗಾಪುರ, ಜಂಗ್ಲಿ, ಮಲ್ಲಾಪುರ, ಸಂಗಾಪುರ ಮೊದಲಾದ ಗ್ರಾಮಗಳಲ್ಲಿ ಕೆಲವರು ಅಕ್ರಮವಾಗಿ ಐತಿಹಾಸಿಕ ಬೆಟ್ಟದ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಪಡೆದು ಕಲ್ಲು ಗಣಿಗಾರಿಕೆಯಲ್ಲಿ ತೊಡಗಿದ್ದಾರೆ.
ಕಲ್ಲುಗಳನ್ನು ನಾನಾ ಅಳತೆಯಲ್ಲಿ ಕತ್ತರಿಸಿ ಕೃಷಿ, ಗೃಹ ನಿರ್ಮಾಣ, ರಸ್ತೆ ಸೇರಿದಂತೆ ಇನ್ನಿತರ ಕಾಮಗಾರಿಗೆ ಲಾರಿ ಟ್ಯ್ರಾಕ್ಟರ್ಗಳಲ್ಲಿ ಅನಧಿಕೃತವಾಗಿ ಸಾಗಿಸುತ್ತಾರೆ ಎಂಬ ಆರೋಪ ಕೇಳಿ ಬಂದಿವೆ.
ಈ ಬಗ್ಗೆ ಕಂದಾಯ, ಪೊಲೀಸ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಗೆ ಸಾಕಷ್ಟು ಬಾರಿ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಮಲ್ಲಾಪುರ ಗ್ರಾಮ ಪಂಚಾಯತಿಯ ಮಾಜಿ ಸದಸ್ಯ ಲಕ್ಷ್ಮಪ್ಪ ರಾಠೋಡ ಆರೋಪಿಸಿದ್ದಾರೆ.
ಇನ್ನು ಕೂಡಲೇ ಅನಧಿಕೃತವಾಗಿ ಸಾಗಾಣಿಕೆ ಮಾಡುವ ಟ್ಯ್ರಾಕ್ಟರ್ಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಳ್ಳಬೇಕು ಎಂದು ರಾಠೋಡ ಒತ್ತಾಯಿಸಿದ್ದಾರೆ.