ಗಂಗಾವತಿ: ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಜೀವನಾಡಿಯಾಗಿರುವ ತುಂಗಭದ್ರಾ ಎಡದಂಡೆ ಕಾಲುವೆಗೆ ಭಾರಿ ಗಂಡಾಂತರ ಕಾದಿದ್ದು, ತಕ್ಷಣವೇ ಎಚ್ಚೆತ್ತು ಈ ಭಾಗದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲುಗಣಿಗಾರಿಕೆ ತಡಯುವಂತೆ ನಿಗಮದ ಅಧಿಕಾರಿಗಳು, ಗಂಗಾವತಿ ತಹಶೀಲ್ದಾರ್ ಅವರಿಗೆ ಪತ್ರ ಬರೆದಿದ್ದಾರೆ.
ಎರಡು ವಾರದ ಹಿಂದೆ ನಿಗಮದ ಅಧಿಕಾರಿಗಳು ಪತ್ರ ಬರೆದಿದ್ದರೂ ಅಕ್ರಮ ಕಲ್ಲು ಸಾಗಾಣಿಕೆ ನಿಯಂತ್ರಣಕ್ಕೆ ಬಾರದ ಹಿನ್ನೆಲೆ ಇದೀಗ ಸ್ವತಃ ಅಧಿಕಾರಿಗಳು ಪತ್ರವನ್ನು ಸಾಮಾಜಿಕ ಜಾಲತಾಣಕ್ಕೆ ಹರಿಬಿಟ್ಟಿದ್ದಾರೆ ಎನ್ನಲಾಗಿದ್ದು ಪತ್ರ ಸಾಕಷ್ಟು ವೈರಲ್ ಆಗಿದೆ.
ಕಾಲುವೆ ವ್ಯಾಪ್ತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಸ್ಪೋಟಕಗಳನ್ನಿಟ್ಟು ಬೆಟ್ಟ-ಗುಡ್ಡಗಳನ್ನು ಸ್ಪೋಟಿಸಲಾಗುತ್ತಿದ್ದೆ. ಇದರಿಂದ ಕಾಲುವೆಯ ಮೂಲ ವಿನ್ಯಾಸ ಹಾಗೂ ಕಟ್ಟಡಕ್ಕೆ ಧಕ್ಕೆಯಾಗುವ ಸಾಧ್ಯತೆಗಳಿವೆ ಎಂದು ಅಧಿಕಾರಿಗಳು ಪತ್ರದಲ್ಲಿ ವಿವರಣೆ ನೀಡಿದ್ದಾರೆ.