ಕೊಪ್ಪಳ : ಕೇಂದ್ರಕ್ಕೆ ಕರ್ನಾಟಕವೇ ಅತಿ ಹೆಚ್ಚು ತೆರಿಗೆ ನೀಡುವ ರಾಜ್ಯ. ಬಿಜೆಪಿಯವರಿಗೆ ನಿಜವಾಗಿಯೂ ರಾಜ್ಯದ ಜನರ ಮೇಲೆ ಕಾಳಜಿ ಇದ್ದರೆ, ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡಿ ನಮ್ಮ ಪಾಲಿನ ಹಣ ಬಿಡುಗಡೆ ಮಾಡಿಸಲಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಒತ್ತಾಯಿಸಿದ್ದಾರೆ.
ಕೊಪ್ಪಳದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರಿಗೆ ಬದ್ಧತೆ ಇದ್ದರೆ, ರಾಜ್ಯದಿಂದ ಒಂದು ಟೀಂ ಕರೆದುಕೊಂಡು ಕೇಂದ್ರ ಸರ್ಕಾರಕ್ಕೆ ರಾಜ್ಯದ ಬರದ ಅರಿವು ಮೂಡಿಸಿ ಕೇಂದ್ರದಿಂದ ಹಣ ತರಲಿ. ಕೇಂದ್ರ ಸರ್ಕಾರವನ್ನು ಹಣ ಕೊಡಿ ಎಂದು ಕೇಳಲು ಒಬ್ಬರೂ ಬಾಯಿ ಬಿಡುತ್ತಿಲ್ಲ ಎಂದು ಆರೋಪಿಸಿದರು. ಅವರಿಗೆ ರಾಜ್ಯದ ಪರವಾಗಿ ಕೇಳುವ ಧ್ವನಿ ಇಲ್ಲ. ಕೇವಲ ಇಲ್ಲಿಗೆ ಬಂದು ಪ್ರಚಾರ ಮಾಡುತ್ತಿದ್ದಾರೆ. ಮಾಡುವ ಕೆಲಸ ಬಿಟ್ಟು ಇಲ್ಲಿ ಪ್ರಚಾರ ಮಾಡಿ, ಜನರ ಕಣ್ಣಿಗೆ ಮಣ್ಣೆರೆಚುತ್ತಿದ್ದಾರೆ ಎಂದರು.
ಈಗಾಗಲೇ ಸಿಎಂ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಭೇಟಿಗೆ ಮೂರು ಬಾರಿ ಪತ್ರ ಬರೆದಿದ್ದಾರೆ. ಅವರಿಂದ ಒಂದೂ ಉತ್ತರ ಬಂದಿಲ್ಲ. ಪ್ರಧಾನಿ ಭೇಟಿಗೆ ನಮಗೆ ಸಮಯ ಕೊಡಲಿಲ್ಲ. ಹಾಗಾಗಿ ಬಿಜೆಪಿಯವರು ನಿಯೋಗ ತೆಗೆದುಕೊಂಡು ಕೇಂದ್ರದ ಬಳಿ ಹೋಗಿ ಒತ್ತಾಯಿಸಲಿ. ಬರದ ವಿಷಯದಲ್ಲಿ ಈಗಾಗಲೇ ಕೇಂದ್ರ ಸರ್ಕಾರಕ್ಕೆ ಸೆ. 23 ರಿಂದ 10 ಬಾರಿ ಪತ್ರ ಬರೆದಿದ್ದೇವೆ. ಇಮೇಲ್, ಫೋನ್ ಸಹ ಮಾಡಿದ್ದೇವೆ ಎಂದು ತಿಳಿಸಿದರು.
ರಾಜ್ಯದ ಪರವಾಗಿ 17000 ಕೋಟಿ ರೂಪಾಯಿ ಪರಿಹಾರ ಹಣ ಕೇಳಿದ್ದೇವೆ. ಆದರೆ ಇಲ್ಲಿಯವರೆಗೂ ಸಕಾರಾತ್ಮಕ ಸ್ಪಂದನೆ ಸಿಕ್ಕಿಲ್ಲ. ಬೆಳೆ ವಿಮೆಯಲ್ಲಿ ಈಗ ಮದ್ಯಂತರ ಪರಿಹಾರವನ್ನು ಕಂಪನಿಗಳು ನೀಡಿವೆ. 3 ಲಕ್ಷ ಜನ ಕೂಲಿಕಾರರು ಈಗಾಗಲೇ 90-100 ದಿನ ಕೆಲಸ ಮಾಡಿದ್ದಾರೆ. ಅವರಿಗೆ ಮತ್ತೆ ಕೆಲಸ ನೀಡದಿದ್ದರೆ ಗುಳೆ ಹೋಗುತ್ತಾರೆ. ಈಗ ನರೇಗಾದಲ್ಲಿ 150 ದಿನ ಕೆಲಸ ನೀಡುವ ಕುರಿತು ನಿರ್ಧರಿಸಬೇಕಾಗಿದೆ. ಕಾನೂನು ಪ್ರಕಾರ, ಬರ ಪ್ರದೇಶದಲ್ಲಿ ನರೇಗಾ ಕೂಲಿ ಹೆಚ್ಚಿಸಬೇಕಾಗಿದೆ ಎಂದು ಸಚಿವರು ಹೇಳಿದರು.
ಕೇಂದ್ರ ಸಚಿವ ಎ ನಾರಾಯಣಸ್ವಾಮಿ ಅವರು ಕಾಂಗ್ರೆಸ್ ಪ್ರತಿಪಕ್ಷದ ನಾಯಕರಿಲ್ಲದೆ ಮುಳುಗುತ್ತಿದೆ ಎಂದಿದ್ದಾರೆ ಎನ್ನುವ ಮಾತಿಗೆ ಪ್ರತಿಕ್ರಿಯಿಸಿ, ಬಿಜೆಪಿಯವರು ತಮ್ಮ ಪಕ್ಷದ ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಿಲ್ಲ. ಈಗ ನಮ್ಮ ಬಗ್ಗೆ ಏನು ಹೇಳುತ್ತಾರೆ? ಎಂದು ಪ್ರಶ್ನಿಸಿದರು.
ಇದನ್ನೂ ಓದಿ: ಬರಗಾಲ ಘೋಷಣೆ: ಕೇಂದ್ರ ಸರ್ಕಾರ ರೈತರನ್ನು ಗೊಂದಲಕ್ಕೀಡು ಮಾಡಿದೆ.. ಕಂದಾಯ ಸಚಿವ ಕೃಷ್ಣಬೈರೇಗೌಡ