ಕೊಪ್ಪಳ : ವಿಧಾನಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅವರಿಗೆ ಹೈಕೋರ್ಟ್ನಲ್ಲಿ ಹಿನ್ನಡೆಯಾದ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಹಾಗೂ ಕಾನೂನು ಸಚಿವರೊಂದಿಗೆ ನಾಳೆ ಮಾತನಾಡುತ್ತೇನೆ ಎಂದು ಸಮಾಜ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಹೇಳಿದ್ದಾರೆ.
ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹೆಚ್ ವಿಶ್ವನಾಥ ಅವರು ಸಚಿವರಾಗಲು ಕಾನೂನಿನ ತೊಡಕು ಇದೆ ಎಂಬುದರ ಕುರಿತಂತೆ ನಾನು ನಿನ್ನೆ ಮಾಧ್ಯಮಗಳ ಮೂಲಕ ತಿಳಿದುಕೊಂಡಿದ್ದೇನೆ. ಬಿಜೆಪಿ ಪಕ್ಷ ಹಾಗೂ ಸಿಎಂ ಯಡಿಯೂರಪ್ಪ ಅವರು ಮಾತು ತಪ್ಪುವುದಿಲ್ಲ. ರಾಜಕಾರಣಕ್ಕಾಗಿ, ಬಾಯಿ ಚಪಲಕ್ಕಾಗಿ ಮಾತನಾಡುವ ಸಾ ರಾ ಮಹೇಶ್ಗೆ ನಾನು ಉತ್ತರ ಕೊಡುವುದಿಲ್ಲ.
ಮರಾಠ ಅಭಿವೃದ್ಧಿ ನಿಗಮ ಸ್ಥಾಪಿಸುವ ಬೇಡಿಕೆ ಬಹಳ ದಿನಗಳಿಂದ ಇತ್ತು. ಆ ಬೇಡಿಕೆಯನ್ನು ಸಿಎಂ ಯಡಿಯೂರಪ್ಪ ಅವರು ಈಗ ಈಡೇರಿಸಿದ್ದಾರೆ. ಕುರುಬ ಸಮುದಾಯವನ್ನು ಎಸ್ಟಿ ಸೇರ್ಪಡೆಗೆ ಬಹಳ ವರ್ಷದಿಂದ ಆ ಸಮುದಾಯದವರು ಹೋರಾಟ ನಡೆಸಿದ್ದಾರೆ.
ಇದನ್ನು ಓದಿ:ಇಂಟರ್ನ್ಯಾಷನಲ್ ಹ್ಯಾಕರ್‌ನ ಪ್ರಾಣ ಸ್ನೇಹಿತನ ಬಂಧನ: ಸಿಸಿಬಿಯಿಂದ ವಿಚಾರಣೆ
ಎಸ್ಸಿ, ಎಸ್ಟಿ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ದೊರೆಯಬೇಕು. ಎಸ್ಸಿ ಮೀಸಲಾತಿ ಶೇ.15 ರಿಂದ 17ಕ್ಕೆ ಏರಿಕೆಯಾಗಬೇಕು. ಎಸ್ಟಿ ಮೀಸಲಾತಿ ಶೇ.3 ರಿಂದ 7ಕ್ಕೆ ಏರಿಕೆಯಾಗಬೇಕು. ಈ ಮೀಸಲಾತಿ ನೀಡಿ ಬಳಿಕ ಉಳಿದ ಜಾತಿಯವರನ್ನು ಸೇರಿಸಿಕೊಳ್ಳಲಿ ಎಂದು ಸಚಿವ ಬಿ. ಶ್ರೀರಾಮುಲು ಇದೇ ಸಂದರ್ಭದಲ್ಲಿ ಹೇಳಿದರು.