ಕುಷ್ಟಗಿ(ಕೊಪ್ಪಳ): ಮುಂದಿನ ಚುನಾವಣೆಯಲ್ಲಿ ಜೆಡಿಎಸ್ ಗೆ 22ರಿಂದ 23 ಸ್ಥಾನ ಗೆಲ್ಲುತ್ತದೆ ಎಂದು ಹೇಳುತ್ತಿರುವ ಬಿಜೆಪಿ ಮತ್ತು ಕಾಂಗ್ರೆಸ್ನವರು 150 ಸ್ಥಾನ ಗೆಲ್ಲುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ಇವರು 150 ಸ್ಥಾನ ಗೆಲ್ತಾರೆ? ಇವರು ಏನೂ ಮಾಡಿದ್ದಾರೆಂದು 150 ಸ್ಥಾನ ಗೆಲ್ಲಿಸುತ್ತಿರಿ? ನಾನೇನು ತಪ್ಪು ಮಾಡಿದ್ದಿನಿ ಎಂದು 22-23 ಸ್ಥಾನ ಗೆಲ್ಲಿಸುತ್ತಿರಿ, ಯೋಚನೆ ಮಾಡಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಜನರಿಗೆ ಮನವಿ ಮಾಡಿದರು.
ಹಸನಸಾಬ್ ದೋಟಿಹಾಳದಲ್ಲಿ ನಡೆದ ಪಂಚರತ್ನ ಯೋಜನೆಗಳ ರಥ ಯಾತ್ರೆ ಹಾಗೂ ಜೆಡಿಎಸ್ ಪಕ್ಷದ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನಿಮ್ಮ ಬದುಕನ್ನು ಸರಿ ಮಾಡುವುದೇ ನನ್ನ ಜೀವನದ ಗುರಿ. ಎರಡು ಬಾರಿ ಹೃದಯ ಚಿಕಿತ್ಸೆಯಾಗಿದ್ದು, ನಾನು ಎಷ್ಟು ವರ್ಷ ಬದುಕುತ್ತೇನೆ ಎಂಬುದು ನನಗೆ ಗೊತ್ತಿಲ್ಲ, ಈ ನಾಡಿನ ಪ್ರತಿ ಕುಟುಂಬಗಳ ಬದುಕನ್ನ ಸರಿಪಡಿಸಬೇಕೆಂದು ಹೊರಟ್ಟಿದ್ದೇನೆ. ಈ ನನ್ನ ಛಲ, ಶಪಥಕ್ಕೆ ಶಕ್ತಿ ತುಂಬಬೇಕಿರುವುದು ಆರೂವರೆ ಕೋಟಿ ಜನತೆ. ಈ ಬಗ್ಗೆ ತೀರ್ಮಾನ ನಿಮಗೆ ಬಿಟ್ಟಿರುವೆ ದಯವಿಟ್ಟು ಯೋಚನೆ ಮಾಡಿ ಎಂದು ಮನವಿ ಮಾಡಿದರು.
2018ರಲ್ಲಿ ಎರಡನೇ ಬಾರಿ ಮುಖ್ಯಮಂತ್ರಿಯಾದಾಗ ಕೊಡಗಿನಲ್ಲಿ ಮಳೆಯಿಂದ ಹಾನಿಗೆ ಒಳಗಾದ ಕುಟುಂಬಗಳಿಗೆ ತಕ್ಷಣ 1ಲಕ್ಷ ಪರಿಹಾರ, ಅವರು ಬಾಡಿಗೆ ಮನೆಯಲ್ಲಿ ಇರಲು 10 ಸಾವಿರ ನೀಡಲಾಗಿದೆ, ಒಂದೇ ವರ್ಷದಲ್ಲಿ 9ಲಕ್ಷದ 85 ಸಾವಿರ ಖರ್ಚು ಮಾಡಿ ಮನೆ ಕಟ್ಟಿಸಿಕೊಟ್ಟಿದ್ದೇನೆ. ಹೋಗಿ ನೋಡಿ, ಕೆಲಸ ಮಾಡಿದ್ದೆನೋ ಇಲ್ಲವೋ ಎಂದು ಹೇಳಿದರು.
ತುಕಾರಾಮ್ ಸೂರ್ವೆ ಅವರನ್ನು ಗೆಲ್ಲಿಸುವ ಶಕ್ತಿ ಮತದಾರರಿಗೆ ಇದೆ: ನನ್ನ ಸರ್ಕಾರದ ಅವಧಿಯಲ್ಲಿ ಕುಷ್ಟಗಿ ವಿಧಾನಸಭಾ ಕ್ಷೇತ್ರದಲ್ಲಿ 16 ಸಾವಿರ ರೈತ ಕುಟುಂಬದ ಸಾಲ ಮನ್ನಾ ಫಲಾನುಭವಿಯಾಗಿದ್ದಾರೆ. ಇದರಲ್ಲಿ ಬಿಜೆಪಿಯವರು, ಕಾಂಗ್ರೆಸ್ಸಿನವರು ಇರಬಹುದು ಯಾವುದೇ ಪಕ್ಷಕ್ಕೂ ಸೇರದವರು ಇದ್ದಾರೆ. ಇದರ ಹೊರತಾಗಿಯೂ ಬಿಜೆಪಿಗೆ, ಕಾಂಗ್ರೆಸ್ಸಿಗೆ ಅಭಿಮಾನದಿಂದ ಮತ ನೀಡಿಯೂ ಮತ್ತೆ ಸಂಕಷ್ಟಕ್ಕೆ ಒಳಗಾಗಿರುವುದನ್ನು ಕಂಡಿರುವೆ. ಈ ಬಾರಿ ಚುನಾವಣೆಯಲ್ಲಿ 16ಸಾವಿರ ಫಲಾನುಭವಿ ಕುಟುಂಬದವರು ಮೂರ್ನಾಲ್ಕು ಜನ ಮನಸ್ಸು ಮಾಡಿ ಮತ ಹಾಕಿದರೆ ತುಕಾರಾಮ್ ಸೂರ್ವೆ ಅವರನ್ನು 60ಸಾವಿರ ಮತಗಳಿಂದ ಗೆಲ್ಲಿಸುವ ಶಕ್ತಿ ಈ ಕ್ಷೇತ್ರದ ಮತದಾರರಿಗೆ ಇದೆ ಎಂದು ಕುಮಾರಸ್ವಾಮಿ ಹೇಳಿದರು.
ನಿಮ್ಮ ತೆರಿಗೆಯ ಹಣದಲ್ಲಿಯೇ ಖಜಾನೆ ತುಂಬಿಸುವೆ: ಜೀವನದ ಸವಾಲು ನಾಡಿನ ಆರೂವರೆ ಕೋಟಿ ಜನತೆ, ಕೇಂದ್ರ ಹಾಗೂ ರಾಜ್ಯ ಸರ್ಕಾರಕ್ಕೆ ಪ್ರತಿ ದಿನ ತೆರಿಗೆ ರೂಪದಲ್ಲಿ ಪಾವತಿಸುವ ನಿಮ್ಮದೇ ಹಣವನ್ನು ವಿವಿಧ ಯೋಜನೆಗಳ ಮೂಲಕ ನಿಮ್ಮ ಮನೆ ಬಾಗಿಲಿಗೆ ತಲುಪಿಸುವುದೇ ನನ್ನ ಜೀವನದ ಸವಾಲು ಆಗಿದೆ ಎಂದರು. ಈ ಯೋಜನೆಗಳಿಗೆ ಸಾಲ ಮಾಡುವುದಿಲ್ಲ, ಹೊರಗಿನಿಂದಲೂ ಸಾಲ ತರುವುದಿಲ್ಲ. ನಿಮ್ಮ ತೆರಿಗೆಯ ಹಣದಲ್ಲಿಯೇ ಖಜಾನೆ ತುಂಬಿಸುವೆ. ಖಜಾನೆ ತುಂಬಿಸಿದ ಹಣದಲ್ಲಿ ವಿವಿಧ ಯೋಜನೆಗಳ ಹೆಸರಿನಲ್ಲಿ ಕೆಲವೇ ಕೆಲವು ಜನ ದೋಚುತ್ತಿದ್ದು, ಇದಕ್ಕೆ ಕಡಿವಾಣ ಹಾಕುವೆ ಎಂದರು.
ಇನ್ಮುಂದೆ ಮತ ಕೇಳಲು ಬರುವುದೇ ಇಲ್ಲ: ಇದಕ್ಕಾಗಿ 22 ಜಿಲ್ಲೆಗಳ ಪಂಚರತ್ನ ಯಾತ್ರೆ ಹಮ್ಮಿಕೊಂಡಿರುವುದಾಗಿ ವಿವರಿಸಿದ ಅವರು ಒಂದು ಬಾರಿ ಪರೀಕ್ಷಿಸಿ, ಐದು ವರ್ಷದ ಬಹುಮತ ಸರ್ಕಾರ ನೀಡಬೇಕೆಂದು ಮನವಿ ಮಾಡಿದರು. ಈ ಐದು ವರ್ಷದ ಮೇಲೆ ಒಂದು ದಿನ ಹೆಚ್ಚಿಗೆ ಕೇಳುವುದಿಲ್ಲ. ರೈತರಿಗೆ ಭೂಮಿ ಇರಲಿ ಇಲ್ಲದೇ ಇರಲಿ ಪ್ರತಿ ಕುಟುಂಬದ ಮಾಸಿಕ ಕನಿಷ್ಠ ಆದಾಯ 15ಸಾವಿರ ರೂ. ಬಾರದೇ ಇದ್ದಲ್ಲಿ ಪಕ್ಷವನ್ನೇ ವಿಸರ್ಜಿಸಿ, ಇನ್ಮುಂದೆ ಮತ ಕೇಳಲು ಬರುವುದೇ ಇಲ್ಲ ಎಂದರು.
ಮತ ಯಾರಿಗೆ ಹಾಕುತ್ತೀರಿ ಎಂದರೆ ಅದಕ್ಕೆ ಉತ್ತರವಿಲ್ಲ: ಜಾತ್ಯಾತೀತ ಜನತಾದಳ ಹಾಗೂ ಕುಮಾರಸ್ವಾಮಿ ಅವರಿಗೆ ಶಕ್ತಿ ಇರುವುದು ಮೂರ್ನಾಲ್ಕು ಜಿಲ್ಲೆಗಳಿಗೆ ಸೀಮಿತ, ಉತ್ತರ ಕರ್ನಾಟಕದಲ್ಲಿ ಈ ಪಕ್ಷಕ್ಕೆ ಯಾರು ಮತ ಹಾಕುತ್ತಾರೆ ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ನನ್ನ ಈ ಪ್ರವಾಸದ ಸಂಧರ್ಭದಲ್ಲಿ ನನ್ನನ್ನು ಪ್ರೀತಿಸುತ್ತೀರಿ, ಹಾರೈಸುತ್ತೀರಿ, ಮುಂದಿನ ಸಿಎಂ ಎಂದು ಘೋಷಿಸುತ್ತೀರಿ ಆದರೆ ಚುನಾವಣೆ ಸಂಧರ್ಭದಲ್ಲಿ ಮತ ಯಾರಿಗೆ ಹಾಕುತ್ತೀರಿ ಎಂದರೆ ಅದಕ್ಕೆ ಉತ್ತರವಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಇದಕ್ಕೆ ನಮ್ಮದು ತಪ್ಪಿದ್ದು, ನಮ್ಮಲ್ಲಿ ಅಭ್ಯರ್ಥಿಗಳ ಕೊರತೆಯಿಂದ ನನಗೆ ಮತ ಕೊಡುವ ಆಸೆ ಇದ್ದರೂ ಮತ ನೀಡಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಪಂಚರತ್ನ ಯಾತ್ರೆಯಿಂದ ಐದು ವರ್ಷ ಅಧಿಕಾರ ನಿರ್ವಹಿಸುವ ಸಂಕಲ್ಪಕ್ಕಾಗಿ ಈ ಯಾತ್ರೆ ಎಂದು ಹೆಚ್ಡಿಕೆ ತಿಳಿಸಿದರು.
ಇದನ್ನೂ ಓದಿ:ಸಿದ್ದರಾಮಯ್ಯಗೆ ಕೋಲಾರಕ್ಕಿಂತ ವರುಣಾ ಸುರಕ್ಷಿತ ಕ್ಷೇತ್ರ: ಕೆ ಎನ್ ರಾಜಣ್ಣ