ಗಂಗಾವತಿ(ಕೊಪ್ಪಳ): ಹನುಮ ಜಯಂತಿ ಹಿನ್ನೆಲೆಯಲ್ಲಿ ತಾಲೂಕಿನ ಅನೆಗುಂದಿ ಬಳಿ ಇರುವ ಐತಿಹಾಸಿಕ ಅಂಜನಾದ್ರಿಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗುತ್ತಿವೆ. ಉತ್ತರ ಭಾರತದಿಂದ ಬಂದ ಸಾಧು ಸಂತರು ತುಂಗಭದ್ರಾ ಜಲದಿಂದ ಅಂಜನಾದ್ರಿಯ ಆಂಜನೇಯನಿಗೆ ವಿಶೇಷ ಅಭಿಷೇಕ ನೆರವೇರಿಸಿದ್ದಾರೆ. ಕಾಶಿ, ಅಯೋಧ್ಯ, ಮಥುರಾ, ಬೃಂದಾವನ, ಚಿತ್ರಕೂಟ ಸೇರಿದಂತೆ ಉತ್ತರ ಭಾರತದ ನಾನಾ ಭಾಗಗಳಿಂದ ಸಾಧು ಸಂತರು ಇಲ್ಲಿಗೆ ಆಗಮಿಸಿದ್ದಾರೆ.
ಬೃಂದಾವನ ಗೋರಕ್ಷಾ ಮಠದ ರಾಮದಾಸ ಮಹಾರಾಜ ಸ್ವಾಮೀಜಿಗಳ ನೇತೃತ್ವದಲ್ಲಿ 108 ಸಾಧು ಸಂತರು ಅಂಜನಾದ್ರಿಗೆ ಆಗಮಿಸಿದ್ದು, ಇಲ್ಲಿನ ಋಷಿಮುಖ ಪರ್ವತದ ತುಂಗಭದ್ರಾ ನದಿಯ ಜಲವನ್ನು ಕುಂಭದ ಮೂಲಕ ಅಂಜನಾದ್ರಿಗೆ ತೆಗೆದುಕೊಂಡು ಹೋಗಿ ಆಂಜನೇಯನಿಗೆ ಅಭಿಷೇಕ ಮಾಡಿದ್ದಾರೆ. ವಿದ್ಯಾದಾಸ ಬಾಬಾ ಸೇರಿದಂತೆ ಇತರೆ ಸಾಧು ಸಂತರು ಇವರಿಗೆ ಸಾಥ್ ನೀಡಿದ್ದಾರೆ. ಹನುಮ ಜಯಂತಿ ಹಿನ್ನೆಲೆಯಲ್ಲಿ ಮಾರುತಿ ಯಜ್ಞ, ರಾಮಾಯಣ ಪ್ರವಚನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿವೆ.