ಗಂಗಾವತಿ: ಕಾರಟಗಿ ತಾಲೂಕಿನ ಬರಗೂರು ಗ್ರಾಮದ ಹೊರ ವಲಯದಲ್ಲಿ ಬುಧವಾರ ಬೆಳಗ್ಗೆ ಪತ್ತೆಯಾದ ಯುವಕನ ಶವ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಮರ್ಯಾದಾ ಹತ್ಯೆ ಎಂದು ಆರೋಪಿಸಲಾಗಿದೆ. ಮೃತನ ತಂದೆ ಹನುಮಂತ ಮರಿಯಪ್ಪ, ಪೊಲೀಸರಿಗೆ ನೀಡಿದ ದೂರಿನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದಾರೆ.
ಮಂಗಳವಾರ ರಾತ್ರಿ ಮನೆಯಲ್ಲಿ ಇದ್ದಾಗ ಮರಿಬಸಪ್ಪ ಎಂಬಾತ ಬಂದು ತನ್ನ ಮಗನನ್ನು ಕರೆದೊಯ್ದಿದ್ದಾರೆ. ಬಳಿಕ ಗ್ರಾಮದ ಹೊರ ವಲಯಕ್ಕೆ ಕರೆದೊಯ್ದು ಅಟ್ಟಾಡಿಸಿ ಮನ ಬಂದಂತೆ ಚೂರಿ ಇರಿದು ಕೊಲೆ ಮಾಡಿದ್ದಾರೆ. ಇದಕ್ಕೆ ಈ ಹಿಂದೆ ಪ್ರೀತಿಸುತ್ತಿದ್ದ ಮೇಲ್ವರ್ಗದ ಯುವತಿ ಸುನಿತಾ, ಆಕೆಯ ತಂದೆ ಮರಿಬಸಪ್ಪ, ತಾಯಿ ಲಲಿತಮ್ಮ, ಅಳಿಯ ಹುಲುಗಪ್ಪ ಹಾಗೂ ಇತರ ಏಳು ಜನ ನನ್ನ ಮಗನ ಕೊಲೆಗೆ ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಕಳೆದ ವರ್ಷ ಗ್ರಾಮದ ಮೇಲ್ವರ್ಗದ ಯುವತಿ ಸುನಿತಾ ಹಾಗೂ ತನ್ನ ಪುತ್ರನ ಮಧ್ಯೆ ಪರಸ್ಪರ ಪ್ರೀತಿ ನಡೆದಿತ್ತು. ಇದು ಅಸಮಾಧಾನಕ್ಕೆ ಕಾರಣವಾಗಿತ್ತು. ಕಳೆದ ಒಂದು ವರ್ಷದಿಂದ ಸತತವಾಗಿ ಬೆದರಿಕೆ ಹಾಕುತ್ತಾ ಇದ್ದರು ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.