ಕುಷ್ಟಗಿ: ಕೊರೊನಾ ಹೈ ರಿಸ್ಕ್ ಪ್ರದೇಶಕ್ಕೆ ಹೋಗಿ ಬಂದವರಿಗೆ ಕಡ್ಡಾಯವಾಗಿ ಗೃಹ/ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಸೀಲ್ ಹಾಕುವುದು ಕಡ್ಡಾಯ. ಆದರೆ, ಇಲ್ಲಿ ಹೋಗಿ ಬಂದವರ ಕೈಗೆ ಸೀಲ್ ಹಾಕದೇ, ಸರ್ಕಾರಿ ಆಸ್ಪತ್ರೆಯ ಓಪಿಡಿ ಚೀಟಿಗೆ (ಕಾಗದದ ಮೇಲೆ) ಕ್ವಾರಂಟೈನ್ ಸೀಲ್ ಮಾಡಿರುವುದು ಗೊತ್ತಾಗಿದೆ.
ಇಲ್ಲಿನ ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವಸತಿ ನಿಲಯದಲ್ಲಿ ಲಾಕ್ಡೌನ್ ಹಿನ್ನೆಲೆಯಲ್ಲಿ 35 ದಿನಗಳ ಕ್ವಾರಂಟೈನ್ ಆಗಿದ್ದ 108 ಉತ್ತರ ಭಾರತದ ವಲಸೆ ಕಾರ್ಮಿಕರನ್ನು ಕಳೆದ ಮೇ. 3 ಹಾಗೂ ಮೇ.4ರಂದು ರಾಜಸ್ಥಾನಕ್ಕೆ 1 ಬಸ್ನಲ್ಲಿ ಹಾಗೂ ಮಧ್ಯಪ್ರದೇಶಕ್ಕೆ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಮೂರು ಬಸ್ ಗಳಲ್ಲಿ ಪ್ರತ್ಯೇಕವಾಗಿ ಕಳುಹಿಸಲಾಗಿತ್ತು.
ಈ ಬಸ್ಗಳು ಮಧ್ಯಪ್ರದೇಶ, ರಾಜಸ್ಥಾನ ಹಾಟ್ಸ್ಪಾಟ್ ಪ್ರದೇಶಗಳಿಗೆ ಹೋಗಿ, ಸುರಕ್ಷಿತವಾಗಿ ಉತ್ತರ ಭಾರತ ಮೂಲದ ಕೂಲಿಕಾರರನ್ನು ಆಯಾ ರಾಜ್ಯಕ್ಕೆ ತಲುಪಿಸಿದ್ದಾರೆ. ಸಾರಿಗೆ ಇಲಾಖೆ ಪ್ರತಿ ಬಸ್ ಗೆ ಇಬ್ಬರು ಚಾಲಕರು, ಒಬ್ಬೊಬ್ಬ ಮೆಕ್ಯಾನಿಕ್ ಸೇರಿದಂತೆ ಒಟ್ಟು 8 ಚಾಲಕರು, 4 ಮೆಕ್ಯಾನಿಕ್ ಗಳನ್ನು ಕಳುಹಿಸಿತ್ತು. ಇವರು ಸೇವೆ ಮುಗಿಸಿ, ಶುಕ್ರವಾರ ಕುಷ್ಟಗಿಗೆ ವಾಪಸ್ ಆಗಿದ್ದಾರೆ.
ಈ ಸಿಬ್ಬಂದಿ ನೇರವಾಗಿ ಇಲ್ಲಿನ ತಾಲೂಕು ಸರ್ಕಾರಿ ಅಸ್ಪತ್ರೆಗೆ ಬಸ್ ಸಮೇತ ಆಗಮಿಸಿದರು. ನಂತರ ಇವರುಗಳಿಗೆ ಥರ್ಮಲ್ ಸ್ಕ್ರೀನಿಂಗ್ ಮಾಡಿಸುವ ಸಂದರ್ಭದಲ್ಲಿ ಕಡ್ಡಾಯವಾಗಿ ಗೃಹ/ ಇನ್ಸ್ಟಿಟ್ಯೂಷನಲ್ ಕ್ವಾರಂಟೈನ್ ಸೀಲ್ ಕೈಗೆ ಹಾಕಿಸಿಕೊಂಡು 14 ದಿನಗಳ ಮನೆಯಲ್ಲಿರಬೇಕು, ಇಲ್ಲವೇ ಸರ್ಕಾರಿ ಕ್ವಾರಂಟೈನ್ ನಲ್ಲಿರಬೇಕೆನ್ನುವ ನಿಬಂಧನೆಗಳಿವೆ. ಆದರೆ, ಈ ಸಿಬ್ಬಂದಿ ಕ್ವಾರಂಟೈನ್ ಸೀಲ್ ಕೈಗೆ ಹಾಕಿಸಿಕೊಳ್ಳಲು ಸುತಾರಂ ಒಪ್ಪಿಕೊಳ್ಳದೇ ಹಿಂಜರಿದರು. ಮನೆಯಲ್ಲಿ ಇರ್ತೇವೆ ಎಲ್ಲಿಯೂ ಹೊರ ಹೋಗುವುದಿಲ್ಲ ಸೀಲ್ ಹಾಕಿಸುವುದಿಲ್ಲ. ಹಾಕಿಸಿಕೊಂಡರೆ ತಮ್ಮನ್ನು ಜನ ಕೊರೊನಾ ರೋಗಿಯಂತೆ ಅನುಮಾನದಿಂದ ನೋಡುತ್ತಾರೆಂದು ಕೈಗೆ ಬೇಡ, ಔಷಧ ಚೀಟಿಗೆ ಹಾಕಿ ಎಂದು ಅವಲತ್ತುಗೊಂಡರು.
ವೈದ್ಯಕೀಯ ಸಿಬ್ಬಂದಿ ವಿಧಿ ಇಲ್ಲದೇ ಚಾಲಕರು ಹೇಳಿದಂತೆ ಒಪಿಡಿ ಚೀಟಿಗೆ ಸೀಲ್ ಹಾಕಿಸಿರುವುದು ಕಂಡು ಬಂತು. ಈ ಕುರಿತು ತಹಶೀಲ್ದಾರ್ ಎಂ.ಸಿದ್ದೇಶ ಅವರು ಪ್ರತಿಕ್ರಿಯಿಸಿ, ಸೋಂಕಿತ ಪ್ರದೇಶಕ್ಕೆ ಹೋಗಿ ಬಂದವರು ಕ್ವಾರಂಟೈನ್ ಆಗಬೇಕು, ಕ್ವಾರಂಟೈನ್ ಸೀಲ್ ಹಾಕಿಸುವುದು ಕಡ್ಡಾಯವಾಗಿದೆ. ಆದರೆ ಕುಷ್ಟಗಿಯ ಸಾರಿಗೆ ಸಿಬ್ಬಂದಿ ಕೈಗೆ ಕ್ವಾರಂಟೈನ್ ಸೀಲ್ ಹಾಕಿಸಿಕೊಳ್ಳದಿರುವುದರ ಬಗ್ಗೆ ಪರಿಶೀಲಿಸುವುದಾಗಿ ತಿಳಿಸಿದ್ದಾರೆ.