ಗಂಗಾವತಿ(ಕೊಪ್ಪಳ): ಎತ್ತು ಎರಿಗೆ ಕೋಣ ಕೆರೆಗೆ ಎಂಬಂತಾಗಿರುವ ಇಲ್ಲಿನ ನಗರಸಭೆಯ ಆಡಳಿತ ಸರಿದಾರಿಗೆ ಬರಬೇಕು ಮತ್ತು ನಗರಸಭೆಯ ನೂತನ ಕಟ್ಟಡದ ಉದ್ಘಾಟನೆ ನಿರಾತಂಕವಾಗಿ ನೆರವೇರಲಿ ಎಂದು ಪ್ರಾರ್ಥಿಸಿ ಸಿಬ್ಬಂದಿ ಹೋಮ - ಹವನದ ಮೊರೆ ಹೋದ ಘಟನೆ ಭಾನುವಾರ ಗಂಗಾವತಿಯಲ್ಲಿ ನಡೆದಿದೆ.
ಸೋಮವಾರ ಮಧ್ಯಾಹ್ನ ನಗರಸಭೆಯ ನೂತನ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದ್ದು, ಸಣ್ಣ ಕೈಗಾರಿಕಾ ಹಾಗೂ ಪೌರಾಡಳಿತ ಸಚಿವ ಎಂಟಿಬಿ ನಾಗರಾಜ್ ಉದ್ಘಾಟನೆ ನೆರವೇರಿಸಲಿದ್ದಾರೆ.
ಇದಕ್ಕೆ ಆಡಳಿತ ಮಂಡಳಿಯ ಬಹುತೇಕ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ಶಾಸಕ ಪರಣ್ಣ ಮುನವಳ್ಳಿ ಉದ್ಘಾಟನೆಗೆ ಪಟ್ಟು ಹಿಡಿದಿದ್ದಾರೆ. ಹೀಗಾಗಿ ನಗರಸಭೆಯ ನೂತನ ಕಟ್ಟಡ ಉದ್ಘಾಟನೆ ಸಿಬ್ಬಂದಿಗೆ ತಲೆ ನೋವಾಗಿದ್ದು, ಎಲ್ಲವೂ ಸುಖಾಂತ್ಯ ಕಾಣಲಿ ಎಂದು ನಗರಸಭೆ ಪೌರಾಯುಕ್ತ ವಿರೂಪಾಕ್ಷಮೂರ್ತಿ ನೇತೃತ್ವದಲ್ಲಿ ನಗರಸಭೆ ನೂತನ ಕಟ್ಟದಲ್ಲಿ ಹೋಮ - ಹವನದ ಮೊರೆ ಹೋದ ಘಟನೆ ಬೆಳಕಿಗೆ ಬಂದಿದೆ.
ಹತ್ತಕ್ಕೂ ಹೆಚ್ಚು ಪುರೋಹಿತರರಿರುವ ತಂಡದಿಂದ ಪವಮಾನ ಹೋಮ, ಶಾಂತಿ ಹೋಮ ಸೇರಿದಂತೆ ನಾನಾ ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಮಧ್ಯರಾತ್ರಿವರೆಗೂ ಹೋಮ ನಡೆಯಿತು ಎಂದು ಸಿಬ್ಬಂದಿ ತಿಳಿಸಿದರು.
ಇದನ್ನೂ ಓದಿ :ಕಾನ್ಪುರ: ದುಷ್ಟಶಕ್ತಿಗಳ ನಿವಾರಣೆಗೆ ಹೋಮ-ಹವನ ನಡೆಸಿದ ಪೊಲೀಸರು