ಕೊಪ್ಪಳ: ಐತಿಹಾಸಿಕ ಆನೆಗುಂದಿ ಉತ್ಸವಕ್ಕೆ ಉಪಮುಖ್ಯಮಂತ್ರಿ/ ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ಚಾಲನೆ ನೀಡಿದರು.
ಶ್ರೀ ಕೃಷ್ಣದೇವರಾಯ ವೇದಿಕೆಯಲ್ಲಿ ಸಿಎಂ ಯಡಿಯೂರಪ್ಪ ಅವರ ಅನುಪಸ್ಥಿತಿಯಲ್ಲಿ ಡಿಸಿಎಂ ಲಕ್ಷ್ಮಣ ಸವದಿ ಅವರು ದೀಪ ಬೆಳಗಿಸುವ ಮೂಲಕ ಉತ್ಸವಕ್ಕೆ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವನಾಗಿದ್ದಾಗ ನಡೆದ ಉತ್ಸವದಲ್ಲಿ ಪಾಲ್ಗೊಂಡಿದ್ದೆ. ಈಗ ಡಿಸಿಎಂ ಆಗಿ ಎರಡನೇ ಬಾರಿ ಉತ್ಸವದಲ್ಲಿ ಭಾಗವಹಿಸಿರೋದು ನನ್ನ ಸೌಭಾಗ್ಯ ಎಂದರು.
ಐತಿಹಾಸಿಕ ತಾಣವಾಗಿರುವ ಆನೆಗುಂದಿಯ ಇತಿಹಾಸವನ್ನು ಕೆಲ ಕಿಡಿಗೇಡಿಗಳು ಹಾಳು ಮಾಡುತ್ತಿರುವ ಬಗ್ಗೆ ತಿಳಿದುಕೊಂಡಿದ್ದೇನೆ. ಅಂತಹ ಕಿಡಿಗೇಡಿಗಳಿಗೆ ಸಾರ್ವಜನಿಕರು ಸಹ ಪಾಠ ಕಲಿಸುವ ಮೂಲಕ ಇತಿಹಾಸವನ್ನು ಉಳಿಸುವ ಕೆಲಸ ಮಾಡಬೇಕು. ಈ ಭಾಗದ ಎಲ್ಲ ಐತಿಹಾಸಿಕ ಪ್ರದೇಶಗಳಿಗೆ ದೇಶದ ಪ್ರವಾಸಿಗರು ಬರುವಂತೆ ಮಾಡುವ ಜವಾಬ್ದಾರಿಯನ್ನು ಪ್ರವಾಸೋದ್ಯಮ ಇಲಾಖೆ ಸಚಿವ ಸಿ.ಟಿ. ರವಿ ಅವರ ಹೆಗಲಿಗೆ ಹಾಕುತ್ತೇನೆ ಎಂದರು.
ಸಚಿವ ಸಿ.ಟಿ. ರವಿ, ಸಂಸದ ಸಂಗಣ್ಣ ಕರಡಿ, ಶಾಸಕರಾದ ಪರಣ್ಣ ಮುನವಳ್ಳಿ, ಹಾಲಪ್ಪ ಆಚಾರ್, ರಾಜವಂಶಸ್ಥ ಶ್ರೀರಂಗದೇವರಾಯಲು, ಜಿಲ್ಲಾಧಿಕಾರಿ ಪಿ. ಸುನೀಲ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ. ಸಂಗೀತಾ ಸೇರಿದಂತೆ ಇತರೆ ಗಣ್ಯರು ಉಪಸ್ಥಿತರಿದ್ದರು.