ಗಂಗಾವತಿ : ಮಕ್ಕಳಾಗದವರಿಗೆ ಇನ್ನು ಮುಂದೆ ನಗರದ ಸರ್ಕಾರಿ ಆಸ್ಪತ್ರೆಯಲ್ಲಿ ಖಾಸಗಿ ಆಸ್ಪತ್ರೆಗಳ ಸಹಯೋಗದೊಂದಿಗೆ ಉನ್ನತ ಮಟ್ಟದ ಚಿಕಿತ್ಸೆ ನೀಡುವ ಸಂಬಂಧ ಯೋಜನೆ ರೂಪಿಸಲಾಗುತ್ತಿದೆ ಎಂದು ಇಲ್ಲಿನ ಉಪವಿಭಾಗ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹಾಗೂ ಸ್ತ್ರೀರೋಗ ತಜ್ಞ ಡಾ. ಈಶ್ವರ ಸವುಡಿ ಹೇಳಿದರು.
ನಗರದ ಉಪ ವಿಭಾಗ ಆಸ್ಪತ್ರೆಯ ಆಡಿಟೋರಿಯಂನಲ್ಲಿ ಬೆಂಗಳೂರಿನ ಗರ್ಭಗುಡಿ ಐವಿಎಫ್ ಸೆಂಟರ್ ವತಿಯಿಂದ ಹಮ್ಮಿಕೊಂಡಿದ್ದ ಉಚಿತ ವೈದ್ಯಕೀಯ ಸಲಹೆ, ಸಮಾಲೋಚನೆ ಮತ್ತು ಉಚಿತ ವೀರ್ಯ ವಿಶ್ಲೇಷಣೆ ಶಿಬಿರದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಖಾಸಗಿ ಸಹಭಾಗಿತ್ವದಲ್ಲಿ ಯೋಜನೆ ಕೈಗೊಳ್ಳಲಾಗಿದೆ.
ಮಕ್ಕಳಾಗದ ದಂಪತಿಗೆ ಸರ್ಕಾರಿ ಆಸ್ಪತ್ರೆಯಲ್ಲಿ ಉನ್ನತಮಟ್ಟದ ಸುಧಾರಿತ ಚಿಕಿತ್ಸೆ ಲಭಿಸಲಿದೆ. ಬಹುತೇಕ ಇಂತಹ ವಿಶೇಷ ಪ್ರಕರಣಗಳಿಗೆ ಸ್ಥಳೀಯವಾಗಿಯೇ ಚಿಕಿತ್ಸೆ ಕೊಡಲು ಏನೆಲ್ಲಾ ಸಾಧ್ಯತೆಗಳಿವೆ ಎಂಬುವುದರ ಬಗ್ಗೆ ಯೋಜನೆ ರೂಪಿಸುತ್ತೇವೆ ಎಂದರು.
ಇನ್ನು, ಇತ್ತೀಚಿನ ದಿನಗಳಲ್ಲಿ ಕೆಲ ಪಾಲಕರು ಪ್ರನಾಳ ಶಿಶು ಪಡೆಯಲು ಮುಂದಾಗುತ್ತಿದ್ದಾರೆ. ಆದರೆ, ಅದಕ್ಕೂ ಮುಂಚೆ ಮಕ್ಕಳಾಗದಿರುವಿಕೆಗೆ ಕಾರಣವೇನು?, ಇದರಲ್ಲಿ ಮಹಿಳೆ ಮತ್ತು ಪುರುಷರ ಪಾತ್ರವೇನು?, ಎಂಬ ಸಂಕ್ಷಿಪ್ತ ಮಾಹಿತಿ ಪ್ರತಿಯೊಬ್ಬರಿಗೂ ಇರಬೇಕು ಎಂದು ಸಲಹೆ ನೀಡಿದರು.