ಗಂಗಾವತಿ: ದನ ಕಾಯಲು ಕುರುಚಲು ಬೆಟ್ಟದ ಪ್ರದೇಶಕ್ಕೆ ತೆರಳಿದ್ದ ಯುವಕನ ಮೇಲೆ ಚಿರತೆ ದಾಳಿ ಮಾಡಿ ಗಂಭೀರ ಗಾಯಗೊಳಿಸಿದ್ದರಿಂದ ಯುವಕ ಸಾವನ್ನಪ್ಪಿದ ಘಟನೆ ತಾಲೂಕಿನ ವಿರುಪಾಪುರ ಗಡ್ಡೆಯಲ್ಲಿ ಸಂಭವಿಸಿದೆ.
ಮೃತ ಯುವಕನನ್ನು ಕರಿಯಮ್ಮನಗಡ್ಡಿಯ ರಾಘವೇಂದ್ರ ವೆಂಕಟೇಶ (19) ಎಂದು ಗುರುತಿಸಲಾಗಿದೆ. ವಿರುಪಾಪುರ ಗಡ್ಡೆಯಲ್ಲಿ (ಋಷಿಮುಖ ಬೆಟ್ಟದ ಹಿಂದೆ ಹಾಗೂ ಗೋವನ್ ಕಾರ್ನರ್ ಹೊಟೇಲ್ ಮಧ್ಯ ಭಾಗದಲ್ಲಿ) ಈ ಘಟನೆ ನಡೆದಿದೆ.
ಚಿರತೆ ದಾಳಿಯ ಭೀತಿಯಿಂದಾಗಿ ಇತ್ತೀಚೆಗೆ ಬೆಟ್ಟದ ಪ್ರದೇಶಕ್ಕೆ ಯಾರೂ ಹೋಗುತ್ತಿರಲಿಲ್ಲ. ಆದರೆ, ಈ ಯುವಕ ಬೆಟ್ಟದ ಸಮೀಪ ಇರುವ ಕುರುಚಲ ಪ್ರದೇಶದಲ್ಲಿ ಗೋವುಗಳನ್ನು ಮೇಯಿಸಲು ಹೋದಾಗ ಈ ಘಟನೆ ನಡೆದಿದೆ.
ಇದನ್ನೂ ಓದಿ : ಗಂಗಾವತಿ: ಬೆಟ್ಟದ ತುದಿಯಲ್ಲಿ ಮೂರು ಚಿರತೆ ಮರಿಗಳು ಪ್ರತ್ಯಕ್ಷ... ಜನರಲ್ಲಿ ಹೆಚ್ಚಿದ ಆತಂಕ!
ಚಿರತೆ ಯುವಕನ ಮೇಲೆ ದಾಳಿ ಮಾಡುತ್ತಿದ್ದಂತೆಯೇ ಗೋವುಗಳು ಚಲ್ಲಾಪಿಲ್ಲಿಯಾಗಿ ಓಡಿ ತಪ್ಪಿಸಿಕೊಂಡಿವೆ. ಗೋವುಗಳು ಓಡುತ್ತಿರುವುದನ್ನು ದೂರದಿಂದ ಗಮನಿಸಿದ ಸ್ಥಳಿಯರು ಘಟನೆ ಸ್ಥಳಕ್ಕೆ ಬಂದಾಗಲೇ ಚಿರತೆ ದಾಳಿ ಮಾಡಿರುವುದು ಖಚಿತವಾಗಿದೆ.