ಕುಷ್ಟಗಿ (ಕೊಪ್ಪಳ): ತಾಲೂಕಿನಾದ್ಯಂತ ಕಳೆದ ಸೋಮವಾರದಿಂದ ಮೋಡ ಕವಿದ ವಾತವರಣ ನಿರ್ಮಾಣವಾಗಿದೆ. ಜಿಟಿ ಜಿಟಿ ಮಳೆಗೆ ಕಡಲೆ, ಹತ್ತಿ, ಜೋಳ, ಸೂರ್ಯಕಾಂತಿ, ಶೇಂಗಾ, ದಸರಾ ಹಬ್ಬಕ್ಕಾಗಿ ಬೆಳೆದ ಚೆಂಡು ಹೂ, ಸೆವಂತಿಗೆ ಹೂ ಬೆಳೆದ ರೈತರ ಮೊಗದಲ್ಲಿ ಮೌನ ಆವರಿಸಿದೆ. ಸದ್ಯಕ್ಕೆ ಮಳೆ ಸಾಕು ಎನ್ನುವಂತಾಗಿದೆ.
ಸದ್ಯ ಕಟಾವು ಹಂತದ ಮೆಕ್ಕೆಜೋಳ, ಶೇಂಗಾ, ಈರುಳ್ಳಿ ಬೆಳೆ ಮಳೆಗೆ ಸಿಲುಕಿದ್ದು, ಕಟಾವಿಗೆ ಮುಂದಾಗುವ ರೈತರಿಗೆ ಮಳೆ ಅಡ್ಡಿಯಾಗಿದೆ. ಹಿಂಗಾರು ಹಂಗಾಮಿನ ಕಡಲೆ, ಜೋಳ ಬಿತ್ತನೆ ಕೈಗೊಂಡ ಮೇಲೂ ಈ ಮಳೆಯಿಂದ ರೈತರ ಆತಂಕ ಕಡಿಮೆಯಾಗಿಲ್ಲ.
ಕಳೆದ ವರ್ಷ ಸಕಾಲದಲ್ಲಿ ಮಳೆ ಬಾರದೆ ಸಂಕಷ್ಟ ಅನುಭವಿಸಿದ್ದ ರೈತರಿಗೆ ಪ್ರಸಕ್ತ ಅವಧಿಯಲ್ಲಿ ಅತಿವೃಷ್ಟಿ ಅನುಭವಿಸುವಂತಾಗಿದೆ. ಈಗ ಬಿದ್ದಿರುವ ಮಳೆಗೆ ಭೂಮಿಯ ತೇವಾಂಶ ಹೆಚ್ಚಾಗಿದ್ದು, ಕೆಲವೆಡೆ ಹೆಚ್ಚಾದ ತೇವಾಂಶದಲ್ಲಿಯೇ ಬಿತ್ತನೆ ಮಾಡಿದ್ದ ರೈತರಿಗೆ ಆತಂಕ ಶುರುವಾಗಿದೆ. ಬಿತ್ತನೆ ಮಾಡಿದ ಮರು ದಿನವೇ ಮಳೆಯಾಗಿದ್ದು, ಮಳೆ ನೀರು ನಿಂತು ಬಿತ್ತಿದ ಬೀಜಗಳು ಕೊಳೆಯುತ್ತಿರುವುದು ರೈತರ ಆತಂಕಕ್ಕೆ ಕಾರಣವಾಗಿದೆ.