ಕೊಪ್ಪಳ/ಗಂಗಾವತಿ : ಹನುಮ ಜಯಂತಿ ಅಂಗವಾಗಿ ನಗರದ ಅಯ್ಯಪ್ಪ ಗಿರಿಯಲ್ಲಿರುವ ಅಯ್ಯಪ್ಪಸ್ವಾಮಿ ದೇಗುಲದಲ್ಲಿ ಏಕಕಾಲಕ್ಕೆ 200ಕ್ಕೂ ಹೆಚ್ಚು ಜನರು ಹನುಮ ಮಾಲೆಯನ್ನು ಧರಿಸಿದರು.
ಡಿಸೆಂಬರ್ 09 ರಂದು ನಡೆಯಲಿರುವ ಹನುಮ ಜಯಂತಿ ಹಿನ್ನೆಲೆ, ಧಾರ್ಮಿಕ ಗುರು ತಾತಯ್ಯ ಅವರಿಂದ ಹನುಮ ಮಾಲೆಯನ್ನು ಧರಿಸುವ ಮೂಲಕ ವಿದ್ಯುಕ್ತವಾಗಿ ವ್ರತಾಚರಣೆ ಕೈಗೊಂಡರು. ಡಿಸೆಂಬರ್ 9ರಂದು ಅಂಜನಾದ್ರಿಯ ಬೆಟ್ಟಕ್ಕೆ ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಹನುಮ ಮಾಲಾಧಾರಿಗಳು ಆಗಮಿಸುತ್ತಾರೆ.
ಹನುಮ ಜಯಂತಿಯಂದು ನಗರದ ಎಪಿಎಂಸಿಯಿಂದ ಕೃಷ್ಣದೇವರಾಯ ವೃತ್ತದವರೆಗೆ ಸಂಕೀರ್ತನಾ ಯಾತ್ರೆ ಇರುತ್ತದೆ. ರಾಜ್ಯದ ಎಲ್ಲಾ ಜಿಲ್ಲೆಗಳ ಹನುಮ ಮಾಲಾಧಾರಿಗಳು ಈ ಯಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ. ಬಳಿಕ ಎಲ್ಲರೂ ಸೇರಿ ಬೆಟ್ಟಕ್ಕೆ ಆಗಮಿಸಿ ವ್ರತಾಚರಣೆಗೆ ವಿರಾಮ ಹೇಳುತ್ತಾರೆ.