ಗಂಗಾವತಿ : ಹಿಂದೂ ಮುಖಂಡ ಹಾಗೂ ಮಾಜಿ ಸಂಸದ ಹೆಚ್ ಜಿ ರಾಮುಲು ನಿವಾಸದಲ್ಲಿ ಬುಧವಾರ ಮುಸ್ಲಿಂ ಧರ್ಮದ ಧಾರ್ಮಿಕ ಆಚರಣೆಯ ಭಾಗವಾದ ಗ್ಯಾರವಿ ಷರೀಫ್ ಆಚರಣೆ ಮಾಡಲಾಯಿತು.
ಮಾಜಿ ಸಂಸದರ ಕುಟುಂಬ ಸದಸ್ಯರು ಸಾಮೂಹಿಕವಾಗಿ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದರು. ಗ್ಯಾರವಿ ಆಚರಣೆಯ ಭಾಗವಾಗಿ ಹಸಿರು ಝಂಡಾ ಕಟ್ಟಿದ್ದ (ಗೌಸೆಪಾಕ್) ಕೋಲಿಗೆ ಹೂವಿನಿಂದ ಅಲಂಕಾರ ಮಾಡಿ, ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಮಾಜಿ ಸಂಸದರ ನಿವಾಸಕ್ಕೆ ತರಲಾಯಿತು. ಈ ವೇಳೆ ಮಾಜಿ ಸಂಸದರ ಪುತ್ರ ಪರಿಷತ್ನ ಮಾಜಿ ಸದಸ್ಯ ಹೆಚ್ ಆರ್ ಶ್ರೀನಾಥ್ ಮುಸ್ಲಿಂ ಮುಖಂಡರನ್ನು ಸ್ವಾಗತಿಸಿದರು.
ಇದನ್ನೂ ಓದಿ: ಮಕನಾದ ಮಾಲಿಂಗಶಾವಲಿ ಬಾಬಾ ವಿಧಿವಶ: ಭಾವೈಕ್ಯತೆಯ ಅಂತ್ಯಸಂಸ್ಕಾರ
ಬಳಿಕ ಝಂಡಾವನ್ನು ಮನೆಯೊಳಗೆ ತಂದು ಅದಕ್ಕೆ ಲೋಬಾನ ಧೂಪ ಹಾಕಲಾಯಿತು. ಬಳಿಕ ಸೋಫಿಗಳು, ಫಕೀರರು ಕವಾಲಿ ಮಾದರಿಯ ಭಕ್ತಿ ಪ್ರಧಾನ ಗೀತೆಗಳನ್ನು ಹಾಡಿದರು. ಮುಸ್ಲಿಂ ಮುಖಂಡರು, ಎಲ್ಲರ ಹಿತಕ್ಕಾಗಿ ಪಾತೆ (ಓದಿಕೆ) ಪ್ರಾರ್ಥನೆ ಮಾಡಿದರು.
ಬಳಿಕ ಮಾಜಿ ಸಂಸದರ ಕುಟುಂಬ ಸದಸ್ಯರು ಸಾಮೂಹಿಕವಾಗಿ ಹಿರೇಜಂತಕಲ್ಗೆ ತೆರಳಿ ಅಲ್ಲಿನ ಝಂಡಾಕಟ್ಟಿಯ ಮಾಬುಸುಬಾನಿಗೆ ಚಾದಾರ ಅರ್ಪಿಸಿದರು. ಭಾವೈಕ್ಯತೆಯ ಸಂಕೇತವಾಗಿ ನಮ್ಮ ಕುಟುಂಬ ಇದನ್ನು ಆಚರಣೆ ಮಾಡುತ್ತಿದೆ ಎಂದು ಮಾಜಿ ಶಾಸಕ ಶ್ರೀನಾಥ್ ತಿಳಿಸಿದರು.