ಕೊಪ್ಪಳ: ಬೆಟ್ಟದ ಪ್ರಪಾತಕ್ಕಿಳಿದು ಮೇಲೆ ಬರಲಾರದೆ ಪರದಾಡುತ್ತಿದ್ದ ಎರಡು ಹಸುಗಳನ್ನು ಮುಸ್ಲಿಂ ಯುವಕರ ತಂಡ ಶತಾಯಗತಾಯ ಪ್ರಯತ್ನ ನಡೆಸಿ ರಕ್ಷಿಸಿದೆ.
ಕೊಪ್ಪಳ ನಗರದ ಗೋಶಾಲೆಯ ನೂರಾರು ಹಸುಗಳು 5 ದಿನಗಳ ಹಿಂದೆ ನಗರದ ಹುಲಿಕೆರೆ ಬಳಿಯ ವಳಕಲ್ಲು ಗುಡ್ಡದ ಬಳಿ ಮೇಯಲು ಹೋಗಿದ್ದವು.
ಈ ಹಸುಗಳ ಪೈಕಿ 4 ಹಸುಗಳು ಸುಮಾರು 300 ಅಡಿ ಆಳದ ಪ್ರಪಾತಕ್ಕೆ ಇಳಿದಿದ್ದವು. ನೂರಾರು ಹಸುಗಳು ಇರುವುದರಿಂದ ಪ್ರಪಾತಕ್ಕೆ ಇಳಿದಿದ್ದ ಈ 4 ಹಸುಗಳ ಬಗ್ಗೆ ಗಮನಕ್ಕೆ ಬಂದಿರಲಿಲ್ಲ. ಈ ನಡುವೆ ಹುಲಿಕೆರೆಯಲ್ಲಿ ಮೀನು ಹಿಡಿಯಲು ಹೋದ ಯುವಕರಿಗೆ ಪ್ರಪಾತದಲ್ಲಿ ಹಸುಗಳು ಸಿಲುಕಿರುವುದು ಗೋಚರಿಸಿದೆ.
ಆ ಹಸುಗಳು ಬೆಟ್ಟ ಹತ್ತಿ ಬರಲು ಪರದಾಡುತ್ತಿರುವುದು ಹಾಗೂ ಮೇವು ಇಲ್ಲದೆ ಹಸಿವಿನಿಂದ ನಿತ್ರಾಣಗೊಂಡಿರುವುದು ಗೊತ್ತಾಗಿದೆ. ಕೂಡಲೇ ಪಕ್ಕದ ದಿಡ್ಡಿಕೇರಿ ಪ್ರದೇಶ ಶುಕ್ರು, ಮಹ್ಮದ್ ಮಸೂದ್ ಹಾಗೂ 20 ಜನ ಯುವಕರ ತಂಡ ಹಸುಗಳ ರಕ್ಷಣೆಗೆ ಮುಂದಾಗಿದೆ.
ಗುರುವಾರ ಬೆಳಗ್ಗೆಯಿಂದಲೇ ಯುವಕರು ಹಗ್ಗದ ಸಹಾಯದಿಂದ ಪ್ರಪಾತದಲ್ಲಿದ್ದ ಹಸುಗಳನ್ನು ಮೇಲೆ ತರಲು ಕಾರ್ಯಾಚರಣೆ ಮಾಡಿದರು. ಕಠಿಣವಾದ ರಕ್ಷಣಾ ಕಾರ್ಯಾಚರಣೆಯಲ್ಲಿ ಮೊದಲು 2 ಹಸುಗಳನ್ನು ಸುರಕ್ಷಿತವಾಗಿ ಮೇಲಕ್ಕೆ ತಂದಿದ್ದಾರೆ.
ಕಾರ್ಯಾಚರಣೆ ಮಧ್ಯಾಹ್ನದವರೆಗೂ ನಡೆದಿದ್ದು, ಮಧ್ಯಾಹ್ನದ ವೇಳೆಗೆ ಯುವಕರು ತೀವ್ರ ನಿತ್ರಾಣವಾದ ಹಸುಗಳಿಗೆ ಆಹಾರ ನೀಡಿ ಮೇಲಕ್ಕೆತ್ತಲು ಯತ್ನಿಸಿದರು. ಆದರೂ ದುರದೃಷ್ಟವಶಾತ್ 2 ಹಸುಗಳು ಅಲ್ಲಿಯೇ ಸಾವನ್ನಪ್ಪಿವೆ.