ಗಂಗಾವತಿ: ಕನಕಗಿರಿ ತಾಲೂಕಿನ ಹುಲಿಹೈದರ ಗ್ರಾಮದಲ್ಲಿ ನಡೆದ ಕೋಮು ಘರ್ಷಣೆಗೆ ಸಂಬಂಧಿಸಿದಂತೆ ಗ್ರಾಮದಲ್ಲಿ ಪ್ರಕ್ಷುಬ್ಧ ವಾತಾವರಣ ಇದ್ದು, ಇಂದಿನಿಂದ ಆಗಸ್ಟ್ 20ರವರೆಗೆ ಗ್ರಾಮದಲ್ಲಿ ನಿಷೇಧಾಜ್ಞೆ ಜಾರಿ ಮಾಡಿ ಉಪವಿಭಾಗಾಧಿಕಾರಿ ಬಸವಣೆಪ್ಪ ಕಳಶೆಟ್ಟಿ ಆದೇಶ ಮಾಡಿದ್ದಾರೆ.
ಗ್ರಾಮದಲ್ಲಿ ವಾಲ್ಮಿಕಿ ಮೂರ್ತಿ ಪ್ರತಿಷ್ಠಾಪನೆಯ ವಿಚಾರವಾಗಿ ಗುಂಪು ಘರ್ಷಣೆ ನಡೆದಿದ್ದು, ಶಾಂತಿ ಕಾಪಾಡುವ ಉದ್ದೇಶಕ್ಕೆ ನಿಷೇಧಾಜ್ಞೆ ಅಗತ್ಯ ಎಂಬ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಗ್ರಾಮದ ಸುತ್ತಲೂ ಎರಡು ಕಿಲೋ ಮೀಟರ್ ನಿಷೇಧಾಜ್ಞೆ ಜಾರಿ ಮಾಡಲಾಗಿದೆ.
ಗ್ರಾಮಕ್ಕೆ ಐಜಿಪಿ ಮನೀಷ್ ಖರ್ಬೀಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣಾಂಗ್ಶು ಗಿರಿ ಹಾಗೂ ತಹಸೀಲ್ದಾರ್ ಧನಂಜಯ್ ಮಾಲಗಿತ್ತಿ ಭೇಟಿ ನೀಡಿ ಪರಿಶೀಲಿಸಿದರು. ಅಲ್ಲದೇ, ಡಿವೈಎಸ್ಪಿ ರುದ್ರೇಶ ಉಜ್ಜನಕೊಪ್ಪ ನೇತೃತ್ವದಲ್ಲಿ ಗ್ರಾಮದಲ್ಲಿ ನೂರಕ್ಕೂ ಹೆಚ್ಚು ಪೊಲೀಸರನ್ನು ಬಿಗಿ ಬಂದೋಬಸ್ತ್ಗೆ ನಿಯೊಜಿಸಲಾಗಿದೆ.
28 ಜನರ ವಿರುದ್ಧ ಎಫ್ಐಆರ್: ಇತ್ತ, ಕೋಮು ಘರ್ಷಣೆಗೆ ಸಂಬಂಧಿಸಿದಂತೆ 28 ಜನರ ಮೇಲೆ ಕನಕಗಿರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಘರ್ಷಣೆಯಲ್ಲಿ ಮೃತಪಟ್ಟ ಪಾಷಾವಲಿ ಮೊಹಮ್ಮದ್ ಸಾಬ್ನ ಸಹೋದರ ಖಾದರ್ ಬಾಷಾ ನೀಡಿದ ದೂರಿನ ಮೇಲೆ ಈ ಎಫ್ಐಆರ್ ದಾಖಲಾಗಿದೆ. ಈ ಘರ್ಷಣೆಗೆ ಕನಕರಾಯ ಶಾಮಣ್ಣ ನಾಯಕ ಹಾಗೂ ಇತರ 27 ಜನರು ಕಾರಣ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ: ಗಂಗಾವತಿ: 3 ದಿನದಿಂದ ನಡುಗಡ್ಡೆಯಲ್ಲಿ ಸಿಲುಕಿರುವ ಕುರಿಗಾಹಿ, ಕುರಿಗಳು