ಕುಷ್ಟಗಿ(ಕೊಪ್ಪಳ): ಕೊರೊನಾದಿಂದ ಸತ್ತರೆ, ನಮ್ಮವರಿಗೆ ನಮ್ಮ ಮೃತದೇಹ ಕೂಡ ಸಿಗುವುದಿಲ್ಲ. ಸೇವಾ ಸಿಂಧು ಆ್ಯಪ್ ಮೂಲಕ ಊರಿಗೆ ತೆರಳಲು ಇದು ಸರಿಯಾದ ಸಮಯ, ಸಿಕ್ಕಿರುವ ಈ ಅವಕಾಶದಲ್ಲೇ ನಾವು ನಮ್ಮ ಊರುಗಳಿಗೆ ತೆರಳಬೇಕು ಎಂದು ತಾಲೂಕಿನ ಗ್ರಾನೈಟ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿರುವ ಹೊರ ರಾಜ್ಯದ ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ.
35 ಕ್ಕೂ ಅಧಿಕ ಗ್ರಾನೈಟ್ ಕಾರ್ಖಾನೆಗಳಲ್ಲಿ ಕೆಲಸ ಮಾಡುತ್ತಿದ್ದವರನ್ನು, ಮೇ.15 ರಂದು ರಾಜಸ್ಥಾನಕ್ಕೆ 60 ಜನರನ್ನು, ಮೇ.16 ರಂದು ಉತ್ತರ ಪ್ರದೇಶಕ್ಕೆ 60 ಜನರನ್ನು ಹುಬ್ಬಳ್ಳಿಗೆ ಬಸ್ನಲ್ಲಿ ಕರೆದೊಯ್ದು, ಅಲ್ಲಿಂದ ರೈಲಿನಲ್ಲಿ ಅವರ ರಾಜ್ಯಕ್ಕೆ ಕಳುಹಿಸಲಾಗಿದೆ ಎಂದು ಕುಷ್ಟಗಿ ಗ್ರಾನೈಟ್ ಮಾಲೀಕರ ಸಂಘದ ಅಧ್ಯಕ್ಷ ಬಲದೇವ ಪ್ರಜಾಪತಿ ಮಾಹಿತಿ ನೀಡಿದರು.
ಕೆಎಸ್ಎಫ್ಸಿ ಯಲ್ಲಿ ಲಕ್ಷಾಂತರ ರೂ. ಸಾಲ ಮಾಡಿ ಗ್ರಾನೈಟ್ ಫ್ಯಾಕ್ಟರಿ ಆರಂಭಿಸಿದ್ದೇವೆ. ತಿಂಗಳಿಗೆ 30ಸಾವಿರ ಸರಾಸರಿ ವಿದ್ಯುತ್ ಬಿಲ್ ಬರುತ್ತಿದೆ. ಕೆಲಸಗಾರರಿಲ್ಲದೇ ಕೆಲಸ ನಿಂತಿದೆ. ಕನಿಷ್ಠ ವಿದ್ಯುತ್ ಬಿಲ್ ಪಾವತಿಗೆ ಹಣವಿಲ್ಲ. ಸರ್ಕಾರ ಈ ಸಂದರ್ಭದಲ್ಲಿ ನಮ್ಮ ಸಹಾಯಕ್ಕೆ ಬರಬೇಕೆಂದು ಪ್ರಜಾಪತಿ ಅವರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.