ಕೊಪ್ಪಳ : ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಗೆ ಭತ್ತದ ಬೆಳೆ ಹಾನಿಗೊಳಗಾದ ರೈತರಿಗೆ ಕೊರೊನಾ ನೆಪವೊಡ್ಡದೆ ಸರ್ಕಾರ ಪರಿಹಾರ ನೀಡಬೇಕು ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಆಗ್ರಹಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಇತ್ತೀಚೆಗೆ ಸುರಿದ ಮಳೆಯಿಂದ ಜಿಲ್ಲೆಯ ಗಂಗಾವತಿ, ಕನಕಗಿರಿ, ಕೊಪ್ಪಳ ಭಾಗದಲ್ಲಿ ಶೇ.80ರಷ್ಟು ಭತ್ತದ ಬೆಳೆ ಹಾಳಾಗಿದೆ. ಕಾಳು ಕಟ್ಟುವ ಸಂದರ್ಭದಲ್ಲಿ ಹಾಗೂ ಇನ್ನೂ ಕೆಲವೆಡೆ ಕಟಾವಿಗೆ ಬಂದಿದ್ದ ಬೆಳೆ ಹಾಳಾಗಿದೆ. ಕುಷ್ಟಗಿ, ಯಲಬುರ್ಗಾ, ಕೊಪ್ಪಳ ತಾಲೂಕಿನಲ್ಲಿ ಹಣ್ಣು, ತರಕಾರಿ ಬೆಳೆಗಾರರಿಗೆ ಮಾರುಕಟ್ಟೆ ವ್ಯವಸ್ಥೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಹಣ್ಣು ಮತ್ತು ತರಕಾರಿಗಳನ್ನ ಹಾಪ್‌ಕಾಮ್ಸ್ ತೆಗೆದುಕೊಂಡು ಹೋಗುವಂತೆ ಸರ್ಕಾರ ಹೇಳುತ್ತಿದೆ. ಆದರೆ, ಅಲ್ಲಿಗೆ ತೆಗೆದುಕೊಂಡು ಹೋಗಲು ಸಾರಿಗೆ ವೆಚ್ಚ ರೈತರಿಗೆ ಹೊರೆಯಾಗಲಿದೆ. ತರಕಾರಿ ಮತ್ತು ಹಣ್ಣು, ಇಲ್ಲಿನ ಬೆಳೆಗಳನ್ನ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರ ಇಲ್ಲಿಯೇ ಖರೀದಿಸಬೇಕು ಎಂದು ಆಗ್ರಹಿಸಿದರು.
ಕೊರೊನಾ ನೆಪವೊಡ್ಡಿ ಬೆಳೆ ಪರಿಹಾರ ಕೊಡದಿದ್ದರೆ ರೈತರಿಗೆ ಬಹಳ ಕಷ್ಟವಾಗಲಿದೆ. ಸಿದ್ದರಾಮಯ್ಯ ಅವರು ಸಿಎಂ ಆಗಿದ್ದಾಗ ಇದೇ ರೀತಿ ಬೆಳೆ ಹಾನಿಯಾದ ಸಂದರ್ಭದಲ್ಲಿ ಅವರನ್ನು ಕರೆದುಕೊಂಡು ಬಂದು ವೈಮಾನಿಕ ಸಮೀಕ್ಷೆ ನಡೆಸಿ,ಪ್ರತಿ ಹೆಕ್ಟೇರ್‌ಗೆ 25 ಸಾವಿರ ರೂ. ಬೆಳೆಹಾನಿ ಪರಿಹಾರ ನೀಡಲಾಗಿತ್ತು. ಎನ್ಡಿಆರ್ಎಫ್ ನಾರ್ಮ್ಸ್ ಪ್ರಕಾರ 13,500 ರೂ. ಹಾಗೂ ಎನ್ಡಿಆರ್ಎಫ್ ಸೇರಿಸಿ 25 ಸಾವಿರ ರೂ. ಪರಿಹಾರ ನೀಡಲಾಗಿತ್ತು. ಅಂದಿನ ಸಂದರ್ಭದಲ್ಲಿ ಬೆಳೆ ವೆಚ್ಚಕ್ಕನುಗುಣವಾಗಿ ಪರಿಹಾರ ನೀಡಲಾಗಿತ್ತು. ಈಗ ಬೆಳೆ ವೆಚ್ಚ ಜಾಸ್ತಿಯಾಗಿದೆ. ಹೀಗಾಗಿ ಪ್ರತಿ ಹೆಕ್ಟೇರ್‌ಗೆ ಕನಿಷ್ಠ 40 ಸಾವಿರ ರೂ. ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಕೊರೊನಾ ಭೀತಿ ಇರುವ ಇಂತಹ ಸಂದರ್ಭದಲ್ಲಿ ಅಧಿಕಾರಿಗಳು ಸಾಕಷ್ಟು ಕೆಲಸ ಮಾಡುತ್ತಿದ್ದಾರೆ. ಈ ವೇಳೆ ಅಧಿಕಾರಿಗಳ ಮೇಲೆ ದರ್ಪ ತೋರಬಾರದು. ಒಬ್ಬರಿಗೊಬ್ಬರು ಸಹಕಾರ ನೀಡಬೇಕು. ಬಿ ಸಿ ಪಾಟೀಲ್ ಈಗ ನಮ್ಮ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕವಾಗಿದ್ದಾರೆ. ಬೆಳೆಹಾನಿ ಪರಿಹಾರ ಕೊಡಿಸುತ್ತಾರೆ ಎಂದು ಬಹಳ ನಿರೀಕ್ಷೆ ಹೊಂದಿದ್ದೇವೆ ಎಂದರು.