ಕೊಪ್ಪಳ: ಮನೆ ಇಲ್ಲದ ಆ ಬಡ ವಸತಿ ರಹಿತರು ತಮಗೂ ಒಂದು ಸ್ವಂತ ಸೂರು ಸಿಗಲೆಂದು ಸರ್ಕಾರದ ವಾಜಪೇಯಿ ನಗರ ವಸತಿ ಯೋಜನೆಗೆ 30 ಸಾವಿರ ರೂ. ವಂತಿಗೆಯನ್ನು ಪಾವತಿಸಿದ್ದರು. ಹಣ ಪಾವತಿಸಿ ವರ್ಷಗಳೇ ಕಳೆದಿದೆ. ಆದರೆ ಮನೆ ನಿರ್ಮಾಣಕ್ಕೆ ಹಣ ಮಂಜೂರಾಗಿಲ್ಲ. ಇತ್ತ ಸೂರಿಲ್ಲದೇ ಅತ್ತ ಹಣವೂ ಇಲ್ಲದೇ ಜಿಲ್ಲೆಯ ಜನರು ಪರದಾಡುತ್ತಿದ್ದಾರೆ.
2008 ರಿಂದ 13 ರವರೆಗೆ ಇದ್ದ ರಾಜ್ಯ ಬಿಜೆಪಿ ಸರ್ಕಾರ ವಸತಿ ರಹಿತ ನಗರದ ಬಡ ಜನರಿಗೆ ಸೂರು ಕಟ್ಟಿಕೊಡುವ ಉದ್ದೇಶದಿಂದ ವಾಜಪೇಯಿ ನಗರ ವಸತಿ ಯೋಜನೆ ರೂಪಿಸಿತ್ತು. ಅದರಂತೆ ಜಿಲ್ಲಾ ಕೇಂದ್ರ ನಗರದಲ್ಲಿಯೂ ಸಹ 2000 ಜಿ+1 ಮನೆ ನಿರ್ಮಾಣಕ್ಕೆ ಅರ್ಹ ಫಲಾನುಭವಿಗಳಿಂದ ಅರ್ಜಿ ಕರೆದು ಅವರಿಂದ 30 ಸಾವಿರ ರೂಪಾಯಿ ಹಣವನ್ನು ವಂತಿಗೆಯಾಗಿ ಸಹ ಪಡೆದಿತ್ತು.
ಅದರಂತೆ 2.10 ಲಕ್ಷದ ಅಂದಾಜು ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿತ್ತು. ಉದ್ದೇಶಿತ ಯೋಜನೆಯಂತೆ ಫಲಾನುಭವಿಗಳಿಂದ 30 ಸಾವಿರ ರೂಪಾಯಿ ವಂತಿಗೆ, 70 ಸಾವಿರ ರೂಪಾಯಿ ರಾಜ್ಯ ಸರ್ಕಾರದ ಸಹಾಯಧನ ಹಾಗೂ ಒಂದು ಲಕ್ಷದ ಹತ್ತು ಸಾವಿರ ರೂಪಾಯಿ ಸಾಲ ವ್ಯವಸ್ಥೆ ಕಲ್ಪಿಸಿ ಒಟ್ಟು 2.10 ಲಕ್ಷ ರೂಪಾಯಿ ವೆಚ್ಚದಲ್ಲಿ ನಿವೇಶನ ಸಹಿತ ಮನೆ ನಿರ್ಮಾಣ ಯೋಜನೆ ಇದಾಗಿದ್ದು, ನೆತ್ತಿಯ ಮೇಲೊಂದು ಸೂರು ಇಲ್ಲದ ಅನೇಕ ಅರ್ಹ ಫಲಾನುಭವಿಗಳು ಸುಮಾರು ಆರೇಳು ವರ್ಷಗಳ ಹಿಂದೆಯೇ ತಮಗೊಂದು ಮನೆ ಸಿಗುತ್ತದೆ ಎಂಬ ಆಸೆಯಿಂದ ಸಾಲಸೂಲ ಮಾಡಿ ಅರ್ಜಿ ಭರ್ತಿ ಮಾಡಿ 30 ಸಾವಿರ ರೂಪಾಯಿ ತಮ್ಮ ಪಾಲಿನ ವಂತಿಗೆ ಹಣವನ್ನು ಸಹ ಪಾವತಿಸಿದ್ದಾರೆ. ಆದರೆ ಈ ಮನೆಗಳು ಇನ್ನೂ ನಿರ್ಮಾಣವಾಗದೆ ಇರೋದು ಫಲಾನುಭವಿಗಳಿಗೆ ಸ್ವಂತ ಮನೆಯ ಕನಸು ಇನ್ನೂ ಕನಸಾಗಿಯೇ ಉಳಿದಿದೆ.
ಯೋಜನೆಯ ಆರಂಭದಲ್ಲಿ ನಗರದ ಹೊರವಲಯದ ಹಿರೇಸಿಂದೋಗಿ ರಸ್ತೆಯಲ್ಲಿ ಜಮೀನು ಖರೀದಿಸಿ ಮನೆ ಕಟ್ಟಿಸಲು ಪ್ರಾರಂಭವಾಯಿತು. ಆದರೆ ಆ ಕಾಮಗಾರಿ ನೆನೆಗುದಿಗೆ ಬಿದ್ದಿದ್ದು, ಕೇವಲ 200 ರಿಂದ 300 ಮನೆಗಳನ್ನು ಮಾತ್ರ ನಿರ್ಮಿಸಿ ಕೈ ಬಿಡಲಾಗಿದೆ. ಇದರಿಂದಾಗಿ ಅಲ್ಲಿ ಜಾಲಿ ಗಿಡಗಳು ಬೆಳೆದು ನಿಂತಿದೆ. ಇನ್ನು ಕೆಲವೆಡೆ ಅರೆಬರೆ ಮನೆಗಳನ್ನು ನಿರ್ಮಾಣ ಮಾಡಿ ಕೈಬಿಡಲಾಗಿದೆ. ಹೀಗಾಗಿ ಮನೆ ನಿರ್ಮಾಣವಾಗುತ್ತವೆಯೋ, ಇಲ್ಲವೋ ಎಂಬ ಅನುಮಾನ ಜನರಲ್ಲಿ ಕಾಡಲಾರಂಭಿಸಿದೆ.
ಇತ್ತ ಮನೆಯೂ ಇಲ್ಲದೆ ಮನೆಗಾಗಿ ಮಾಡಿರುವ ಸಾಲವು ಏರುತ್ತಿರೋದು ಫಲಾನುಭವಿಗಳಲ್ಲಿ ಬೇಸರಕ್ಕೆ ಕಾರಣವಾಗಿದೆ. ಹೀಗಾಗಿ ಸಂಬಂಧಪಟ್ಟ ಅಧಿಕಾರಿಗಳು ನಿಗಾ ವಹಿಸಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ಬೇಗನೆ ನಿರ್ಮಾಣ ಮಾಡಿಕೊಡಲು ಮುಂದಾಗಬೇಕು ಎಂದು ಫಲಾನುಭವಿಗಳು ಆಗ್ರಹಿಸಿದ್ದಾರೆ.