ಕೊಪ್ಪಳ: ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಕಲೆಗಳಲ್ಲಿ ಕೊಪ್ಪಳ ಜಿಲ್ಲೆಯ ಕಿನ್ನಾಳ ಕಲೆಯೂ ಒಂದು. ಕಿನ್ನಾಳ ಕಲೆಯ ಕರಕುಶಲ ವಸ್ತುಗಳಿಗೆ ಬೇಡಿಕೆ ಇದೆಯಾದರೂ ಸರ್ಕಾರವೂ ಇದನ್ನು ಪ್ರೋತ್ಸಾಹಿಬೇಕು. ಈ ಹಿಂದೆ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮವು ಕಿನ್ನಾಳ ಕಲಾವಿದರಿಗೆ ಕಲಾಕೃತಿ ರೆಡಿ ಮಾಡಿಕೊಡಲು ನೀಡುತ್ತಿದ್ದ ಆರ್ಡರ್ ಸುಮಾರು ವರ್ಷಗಳಿಂದ ಬಂದ್ ಆಗಿದೆ. ಸರ್ಕಾರದ ಪ್ರೋತ್ಸಾಹವಿಲ್ಲದೆ ಇರೋದು ಕಿನ್ನಾಳ ಕಲಾವಿದರ ಬೇಸರಕ್ಕೆ ಕಾರಣವಾಗುತ್ತಿದೆ.
ಕೊಪ್ಪಳ ತಾಲೂಕಿನ ಕಿನ್ನಾಳ ಗ್ರಾಮದ ಚಿತ್ರಗಾರ ಕುಟುಂಬಗಳು ಪಾರಂಪರಿಕವಾಗಿ ತಯಾರಿಸುವ ಕರಕುಶಲ ವಸ್ತುಗಳು ರಾಷ್ಟ್ರ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತವೆ ಹಾಗೂ ಪ್ರಸಿದ್ಧಿಯನ್ನು ಪಡೆದಿವೆ. ಈ ಕಲೆ ಕಿನ್ನಾಳ ಕಲೆ ಎಂದೇ ಖ್ಯಾತಿ ಪಡೆದಿದೆ. ಕಿನ್ನಾಳ ಕಲೆಯ ಮೂಲಕವೇ ಕಿನ್ನಾಳದ ಅನೇಕರಿಗೆ ರಾಜ್ಯೋತ್ಸವ ಪ್ರಶಸ್ತಿಯೂ ಸಹ ಲಭಿಸಿದೆ. ಇಂತಹ ಉತ್ಕೃಷ್ಠ ಕಲೆಯಿಂದ ಕಿನ್ನಾಳ ಕಲೆಯ ಕರಕುಶಲ ವಸ್ತುಗಳು ಗಮನ ಸೆಳೆಯುತ್ತಿವೆ. ಕಿನ್ನಾಳ ಕಲೆಗೆ ರಾಜ್ಯ ಸರ್ಕಾರ ಈ ಹಿಂದೆ ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಮೂಲಕ ಪ್ರೋತ್ಸಾಹ ನೀಡುತ್ತಿತ್ತು.
ಕಿನ್ನಾಳ ಕಲೆಯ ಕಲಾಕೃತಿಗಳನ್ನು ಖರೀದಿಸಿ ಅದನ್ನು ಬೆಂಗಳೂರಿನ ಕಾವೇರಿ ಎಂಪೋರಿಯಂನಲ್ಲಿ ಪ್ರದರ್ಶನ ಹಾಗೂ ಮಾರಾಟ ಮಾಡಲಾಗುತ್ತಿತ್ತಂತೆ. ಕಳೆದ ಸುಮಾರು ವರ್ಷಗಳಿಂದ ಈ ಪ್ರಕ್ರಿಯೆಯನ್ನು ನಿಗಮ ಸ್ಥಗಿತಗೊಳಿಸಿದೆ ಎಂದು ಬೇಸರ ವ್ಯಕ್ತಪಡಿಸುತ್ತಾರೆ ಕಿನ್ನಾಳ ಕಲೆಯ ಕಲಾವಿದ ಕಿಶೋರ ಚಿತ್ರಗಾರ.
ಒಬ್ಬೊಬ್ಬ ಕಲಾವಿದರಿಗೆ ತಿಂಗಳಿಗೆ ಮೂರರಿಂದ ನಾಲ್ಕು ಸಾವಿರ ರೂಪಾಯಿ ಮೌಲ್ಯದ ಕಲಾಕೃತಿಗಳ ಕೆಲಸ ನೀಡುತ್ತಿತ್ತು. ಅಲ್ಲದೆ ಮನೆ ನಿರ್ಮಾಣ ಮಾಡಿಕೊಳ್ಳಲು ಆಗ ನಿಗಮದಿಂದ ಸಾಲ ಸೌಲಭ್ಯವೂ ಇತ್ತು. ಆದರೆ ಈಗ ನಿಗಮ ಕಲಾಕೃತಿಗಳನ್ನು ರೆಡಿ ಮಾಡಿಕೊಡಲು ನೀಡುತ್ತಿದ್ದ ಆರ್ಡರ್ ಸುಮಾರು ವರ್ಷಗಳಿಂದ ಸ್ಥಗಿತಗೊಳಿಸಿದೆ. ಇದರಿಂದಾಗಿ ಇದೇ ಕಲೆಯನ್ನು ನಂಬಿಕೊಂಡಿದ್ದ ಅನೇಕ ಕಲಾವಿದರು ಈಗ ಇದನ್ನು ಬಿಟ್ಟು ಬೇರೆ ವೃತ್ತಿಯತ್ತ ತೆರಳುತ್ತಿದ್ದಾರೆ. ಉತ್ಕೃಷ್ಠ ಪಾರಂಪರಿಕ ಕಲೆಯಾಗಿರುವ ಕಿನ್ನಾಳ ಕಲೆಯು ಈ ಮೂಲಕ ನಶಿಸುವ ಭೀತಿ ಎದುರಾಗಿದೆ ಎಂದು ಆತಂಕ ವ್ಯಕ್ತಪಡಿಸುತ್ತಾರೆ ಕಲಾವಿದರು.
ಕಲೆಯು, ಕಲಾವಿದರು ಉಳಿದು ಬೆಳೆಯಬೇಕಾದರೆ ಪ್ರೋತ್ಸಾಹ ಅಗತ್ಯ. ಕಿನ್ನಾಳ ಕಲೆಯ ಕರಕುಶಲ ವಸ್ತುಗಳಿಗೆ ಬೇಡಿಕೆ ಇದೆಯಾದರೂ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹದ ಅಗತ್ಯವಿದೆ. ಹೀಗಾಗಿ ಕಿನ್ನಾಳ ಕಲೆಯ ಕಲಾವಿದರು ಸರ್ಕಾರದ ಹೆಚ್ಚಿನ ಪ್ರೋತ್ಸಾಹದ ನಿರೀಕ್ಷೆಯಲ್ಲಿದ್ದಾರೆ.