ಕೊಪ್ಪಳ: ದೇಶಕ್ಕೆ ಸ್ವಾತಂತ್ರ್ಯ ಬಂದು 7 ದಶಕಗಳೇ ಉರುಳಿದರೂ ಇನ್ನೂ ಅದೆಷ್ಟೋ ಗ್ರಾಮಗಳು ಸರಿಯಾದ ಮೂಲ ಸೌಲಭ್ಯಗಳಿಲ್ಲದೇ ಕುಗ್ರಾಮಗಳಾಗಿಯೇ ಉಳಿದಿವೆ. ಅಂತಹ ಕುಗ್ರಾಮಗಳ ಸಾಲಿಗೆ ಜಿಲ್ಲೆಯ ಅಡವಿಹಳ್ಳಿ ಗ್ರಾಮವೂ ಸಹ ಸೇರುತ್ತದೆ. ಸದ್ಯ ಹೆಸರಿಗೆ ತಕ್ಕಂತೆ ಇರುವ ಈ ಗ್ರಾಮದ ಜನರ ನೋವಿನ ಧ್ವನಿಗೆ ಗವಿಮಠದ ಮಿಡಿದಿದ್ದು, ಗ್ರಾಮವನ್ನು ಈ ವರ್ಷ ದತ್ತು ಪಡೆದಿದೆ.
ಜಿಲ್ಲೆಯ ಕುಕನೂರು ತಾಲೂಕಿನ ಕಟ್ಟಕಡೆಯ ಗ್ರಾಮ ಅಡವಿಹಳ್ಳಿ. ಹೆಸರಿಗೆ ತಕ್ಕಂತೆಯೇ ಈ ಗ್ರಾಮ ಇರುವುದು ಕಾಕತಾಳೀಯ. ಗ್ರಾಮದ ಬಳಿ ಇರುವ ಹಳ್ಳ ಮಳೆಗಾಲದಲ್ಲಿ ಭರ್ತಿಯಾಗಿ ಅವಾಂತರ ಸೃಷ್ಟಿಸುತ್ತಿತ್ತು. ಇದರಿಂದ ಮೂಲಗ್ರಾಮದಿಂದ ಸುಮಾರು 4 ಕಿ.ಮೀ. ದೂರಕ್ಕೆ 2005 ರಲ್ಲಿ ಸ್ಥಳಾಂತರ ಮಾಡಲಾಯಿತು.
ಸುಮಾರು 80ಕ್ಕೂ ಹೆಚ್ಚು ಮನೆಗಳಿರುವ, 500 ಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಅಡವಿಹಳ್ಳಿ ಈಗಲೂ ಸಹ ಮೂಲ ಸೌಕರ್ಯಗಳಿಂದ ವಂಚಿತವಾಗಿದೆ. ರಸ್ತೆ, ಶುದ್ಧ ಕುಡಿಯುವ ನೀರು ಇಲ್ಲ, ಎರಡು ದಿನಕ್ಕೊಮ್ಮೆ ಬರುವ ನಲ್ಲಿ ನೀರು ಕುಡಿಯಲು ಯೋಗ್ಯವಾಗಿಲ್ಲ. ಸಾರಿಗೆ ವ್ಯವಸ್ಥೆ ಅಂತೂ ಕೇಳಲೇಬಾರದು. ಇನ್ನೂ ಮಳೆಗಾಲದಲ್ಲಿ ಅಂತೂ ಈ ಗ್ರಾಮದ ಜನರು ಪಡುವ ಯಾತನೆ ದೇವರಿಗೆ ಪ್ರೀತಿ.
ಗ್ರಾಮದಲ್ಲಿ ಐದನೇ ತರಗತಿಯವರೆಗೆ ಮಾತ್ರ ಶಾಲೆ ಇದೆ. ಹೆಚ್ಚಿನ ವಿದ್ಯಾಭ್ಯಾಸಕ್ಕೆ ತಳಕಲ್ಗೆ ಹೋಗಬೇಕು. ಅಲ್ಲಿಗೆ ಹೋಗಲು ಸಾರಿಗೆ ವ್ಯವಸ್ಥೆ ಇಲ್ಲ. ಹೀಗಾಗಿ ತುರ್ತು ಸಂದರ್ಭದಲ್ಲಿ ಈ ಗ್ರಾಮದವರು ಪರದಾಡವಂತಹ ಸ್ಥಿತಿ ನಿರ್ಮಾಣವಾಗುತ್ತದೆ. ಅಡವಿಹಳ್ಳಿಗೆ ಕಾಲಿಡುತ್ತಿದ್ದಂತೆ ಇಂತಹ ಊರು ಈ ಕಾಲದಲ್ಲಿಯೂ ಇದೆಯಾ ಎಂಬ ಅನುಮಾನ ಮೂಡುವಂತೆ ಮಾಡುತ್ತಿದೆ.
ಓದಿ-ಮುಂಬೈನ ಸ್ಟುಡಿಯೋದಲ್ಲಿ ಭಾರೀ ಅಗ್ನಿ ಅವಘಡ
ವಾಸ್ತವವಾಗಿ ಇಂತಹ ದುಃಸ್ಥಿತಿಯಲ್ಲಿರುವ ಈ ಗ್ರಾಮದ ಮೇಲೆ ಕೊಪ್ಪಳದ ಶ್ರೀ ಗವಿಮಠದ ದೃಷ್ಠಿ ಬಿದ್ದಿದೆ. ಈ ವರ್ಷದ ಜಾತ್ರೆಯ ಹಿನ್ನೆಲೆಯಲ್ಲಿ ಅಡವಿಹಳ್ಳಿ ಗ್ರಾಮವನ್ನು ದತ್ತು ಪಡೆದು ಮೂಲ ಸೌಕರ್ಯ ಒದಗಿಸಿ ಸ್ಮಾರ್ಟ್ ವಿಲೇಜ್ ಮಾಡುವ ಸಂಕಲ್ಪ ಮಾಡಿದೆ. ಸರ್ವೋದಯ ಸಂಸ್ಥೆ ಹಾಗೂ ಮುಕುಂದ ಸ್ಟೀಲ್ಸ್ ಸಹಯೋಗದೊಂದಿಗೆ ಗವಿಮಠವು ಅಡವಿಹಳ್ಳಿ ಗ್ರಾಮವನ್ನು ದತ್ತು ಪಡೆದುಕೊಂಡಿದೆ. ಹೀಗಾಗಿ ಈ ಗ್ರಾಮದ ಚಿತ್ರಣ ಬದಲಾಗುತ್ತದೆ ಎಂಬ ಭರವಸೆ ಈಗ ಚಿಗುರೊಡೆದಂತಾಗಿದೆ.
ಜಾತ್ರೆಯ ಸಂದರ್ಭದಲ್ಲಿ ಶ್ರೀ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಅಡವಿಹಳ್ಳಿಯನ್ನು ದತ್ತುಪಡೆದುಕೊಂಡು ಅದನ್ನು ಸ್ಮಾರ್ಟ್ ಸಿಟಿ ಕಲ್ಪನೆಯ ಹಾಗೆ ಸ್ಮಾರ್ಟ್ ವಿಲೇಜ್ ಮಾಡುತ್ತೇವೆ ಎಂದು ಘೋಷಣೆಯನ್ನು ಸಹ ಮಾಡಿದ್ದಾರೆ. ಫೆಬ್ರವರಿ 2 ಅಥವಾ ಮೂರನೇ ವಾರದಲ್ಲಿ ಅಡವಿಹಳ್ಳಿ ಸ್ಮಾರ್ಟ್ ವಿಲೇಜ್ ಮಾಡುವ ಕೆಲಸಕ್ಕೆ ಚಾಲನೆ ಸಿಗಲಿದೆ.
ಇಷ್ಟು ವರ್ಷವಾದರೂ ಸಹ ತಮ್ಮೂರು ಮೂಲ ಸೌಕರ್ಯಗಳನ್ನು ಕಾಣದೆ ಅಜ್ಞಾತವಾಗಿ ಉಳಿದಿತ್ತು. ಈಗ ಗವಿಮಠದ ಶ್ರೀಗಳು ತಮ್ಮೂರಿಗೆ ಮೂಲ ಸೌಕರ್ಯ ಕಲ್ಪಿಸುವ ಸಂಕಲ್ಪ ಮಾಡಿರುವುದಕ್ಕೆ ತುಂಬಾ ಸಂತಸವಾಗುತ್ತಿದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಅಡವಿಹಳ್ಳಿ ಗ್ರಾಮಸ್ಥರು. ಒಟ್ಟಿನಲ್ಲಿ ಅಡವಿಹಳ್ಳಿಯ ಹಣೆಬರಹ ಬದಲಾಯಿಸಲು ಗವಿಸಿದ್ದೇಶ್ವರನೇ ಬರಬೇಕಾಯಿತು ಎನಿಸುತ್ತದೆ.