ಗಂಗಾವತಿ (ಕೊಪ್ಪಳ): ನಗರದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಗವಿಸಿದ್ದೇಶ್ವರ ಚಿಟ್ ಫಂಡ್ನಲ್ಲಿ ಕೋಟ್ಯಂತರ ರೂಪಾಯಿ ಮೊತ್ತದ ಅವ್ಯವಹಾರವಾಗಿದ್ದು, ಕೂಡಲೇ ಗ್ರಾಹಕರಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಆಗ್ರಹಿಸಿ ಠೇವಣಿದಾರರು ನಗರ ಠಾಣೆಗೆ ಆಗಮಿಸಿ ಮನವಿ ಮಾಡಿದ್ದಾರೆ.
ಕಳೆದ ಹಲವು ವರ್ಷಗಳಿಂದ ನಗರದಲ್ಲಿ ಕಾರ್ಯಾಚರಣೆ ಮಾಡುತ್ತಿದ್ದ ಗವಿಸಿದ್ದೇಶ್ವರ ಚಿಟ್ ಫಂಡ್ ಸಂಸ್ಥೆ ಗ್ರಾಹಕರು, ಠೇವಣಿದಾರರು ಹಾಗೂ ಶೇರುದಾರರದಿಂದ ಕೋಟ್ಯಂತರ ರೂಪಾಯಿ ಹಣ ಸಂಗ್ರಹಿಸಿದೆ. ಹಣಕ್ಕೆ ಸಂಸ್ಥೆಯೇ ಹೊಣೆ. ಆದರೆ ಈಗ ಸಂಸ್ಥೆಯ ಮುಖ್ಯಸ್ಥ ಜವಳಿ ಅವರು ಏಜಂಟರಿಗೆ ನೀಡಿದ ಹಣ ಸಕಾಲಕ್ಕೆ ಸಂಸ್ಥೆಗೆ ತಂದು ಕಟ್ಟಿಲ್ಲ ಎಂದು ನೆಪ ಹೇಳುತಿದ್ದಾರೆ.
ಒಬ್ಬೊಬ್ಬ ಗ್ರಾಹಕರಿಗೆ ಕನಿಷ್ಠ 10 ಸಾವಿರದಿಂದ ಲಕ್ಷಾಂತರ ರೂಪಾಯಿ ಹಣ ನೀಡಬೇಕಿದೆ ಎಂದು ದೂರುದಾರರು ವಿವರಣೆ ನೀಡಿದರು. ಈ ಬಗ್ಗೆ ಸಮಸ್ಯೆ ಆಲಿಸಿದ ನಗರ ಠಾಣೆಯ ಪಿಐ ವೆಂಕಟಸ್ವಾಮಿ, ಸೂಕ್ತ ದಾಖಲೆ ಸಮೇತ ಬನ್ನಿ. ಅಧಿಕೃತವಾಗಿ ದೂರು ಕೊಟ್ಟರೆ ಮಾತ್ರ ಸಂಬಂಧಿತರನ್ನು ಕರೆದು ವಿಚಾರಣೆ ಮಾಡಿ ಕಾನೂನು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.