ಗಂಗಾವತಿ: ನಿತ್ಯ ಸಾವಿರಾರು ಜನ ಓಡಾಡುತ್ತಿದ್ದ ಸ್ಥಳವಿದು. ಅತ್ಯುತ್ತಮ ಗುಣಮಟ್ಟದ ಸೇವೆ ಸಿಗುತ್ತದೆ ಎಂಬ ಕಾರಣಕ್ಕೆ ನೆರೆ ಹೊರೆಯ ತಾಲೂಕುಗಳಲ್ಲದೇ ಜಿಲ್ಲೆಯಿಂದಲೂ ರೋಗಿಗಳು ಹೆಚ್ಚಿನ ಪ್ರಮಾಣದಲ್ಲಿ ಬರುತ್ತಿದ್ದರು. ಆದರೆ, ಇದೇ ಆಸ್ಪತ್ರೆಯಲ್ಲೀಗ ಇಂದು ಒಂದು ನರಪಿಳ್ಳೆಯೂ ಕಾಣಿಸ್ತಿಲ್ಲ. ಇದು ಕೊರೊನಾದ ಭೀಕರತೆಗೆ ಸಾಕ್ಷಿ..
ಸಿಬ್ಬಂದಿಯೊಬ್ಬರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಹಿನ್ನೆಲೆ ನಿತ್ಯ ಜನರಿಂದ ತುಂಬಿ ತುಳುಕುತ್ತಿದ್ದ ಗಂಗಾವತಿ ಉಪ ವಿಭಾಗ ಸರ್ಕಾರಿ ಆಸ್ಪತ್ರೆ ಇದೀಗ ಖಾಲಿ ಖಾಲಿ. ಹೆಸರಿಗೆ 30 ಬೆಡ್ ಆಸ್ಪತ್ರೆಯಾದರೂ ನೂರಕ್ಕೂ ಅಧಿಕ ಒಳ ರೋಗಿಗಳು ದಾಖಲಾಗುತ್ತಿದ್ದರು. ಹೊರ ರೋಗಿಗಳ ಸಂಖ್ಯೆ ದಿನಕ್ಕೆ 650 ರಿಂದ 900ಕ್ಕೆ ಸಮೀಪಿಸುತ್ತಿತ್ತು. ಲಾಕ್ಡೌನ್ ಸಂದರ್ಭದಲ್ಲೂ ಆಸ್ಪತ್ರೆಯ ಆವರಣದಲ್ಲಿ ಇಂತಹ ದೃಶ್ಯ ಕಂಡು ಬಂದಿರಲಿಲ್ಲ. ಇದೀಗ ಇಡೀ ಆಸ್ಪತ್ರೆಯ ಆವರಣದಲ್ಲಿ ರೋಗಿಗಳಲ್ಲ, ಒಬ್ಬ ಸಿಬ್ಬಂದಿಯೂ ಇಲ್ಲದಂತಾಗಿದೆ.
ಸಹೊದ್ಯೋಗಿಯೊಬ್ಬರಿಗೆ ತಗುಲಿರುವ ಸೋಂಕಿನಿಂದ ಇಡೀ ಆಸ್ಪತ್ರೆಯ ಸಿಬ್ಬಂದಿ ತಲ್ಲಣಗೊಂಡಿದ್ದಾರೆ. ಆಸ್ಪತ್ರೆಯಲ್ಲಿ ಬಹುತೇಕ ಎಲ್ಲಾ ರೋಗಿ ಮತ್ತು ಗರ್ಭಿಣಿ, ಬಾಣಂತಿಯರನ್ನೂ ಈಗಾಗಲೇ ಮನೆಗೆ ಕಳುಹಿಸಲಾಗಿದೆ.