ಗಂಗಾವತಿ : ಕೋವಿಡ್ ಲಾಕ್ ಡೌನ್ ಎಲ್ಲಾ ಕ್ಷೇತ್ರಗಳ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿ ಜನ ಸಂಕಷ್ಟಕ್ಕೆ ಸಿಲುಕಿದರೆ, ತಾಲೂಕಿನ ಮಹಿಳೆಯೊಬ್ಬರು ಇದೇ ಸಮಯವನ್ನು ಸರಿಯಾಗಿ ಉಪಯೋಗಿಸಿಕೊಂಡು ಅಣಬೆ ಬೇಸಾಯದಿಂದ ಸ್ವಾವಲಂಬನೆಯ ಬದುಕು ಕಟ್ಟಿಕೊಂಡಿದ್ದಾರೆ.
ತಾಲೂಕಿನ ಚಿಕ್ಕಬೆಣಕಲ್ ಗ್ರಾಮದ ನೀಲಮ್ಮ ಮಂಜುನಾಥ ಅಣಬೆ ಬೆಳೆದು ಯಶಸ್ಸು ಕಂಡಿರುವ ಮಹಿಳೆ. ಲಾಕ್ ಡೌನ್ ಅವಧಿಯಲ್ಲಿ ಗ್ರಾಮದ ಬೆಟ್ಟದ ಲಿಂಗೇಶ್ವರ ಎಂಬ ಸ್ವಸಹಾಯ ಸಂಘದಿಂದ ಸಾಲ ಪಡೆದುಕೊಂಡ ಇವರು, ಮನೆಯಲ್ಲಿಯೇ ಅಣಬೆ ಬೇಸಾಯಕ್ಕೆ ಶುರುಮಾಡಿದ್ದರು. ಇದೀಗ, ಅವರ ಪರಿಶ್ರಮ ಫಲಕೊಟ್ಟಿದ್ದು, ಪ್ರತಿದಿನ 5 ರಿಂದ 8 ಕೆ.ಜಿ ಅಣಬೆ ಫಸಲು ತೆಗೆಯುತ್ತಿದ್ದಾರೆ.
ಮಹಿಳೆಯ ಯಶೋಗಾಥೆ ಕೇಳಿದ ತಾಲೂಕು ಪಂಚಾತಿಯತ್ ಇಒ ಮೋಹನ್, ಅಣಬೆ ಘಟಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಅಣಬೆ ಬೇಸಾಯದ ಲಾಭದಿಂದ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲವಾಗಿದೆ ಎಂದು ಮಹಿಳೆ ಖುಷಿಯಿಂದ ಹೇಳುತ್ತಾರೆ.