ಗಂಗಾವತಿ: ಕೊರೊನಾ ಎಲ್ಲೆಡೆ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ವಿಳಂಬವಾಗುತ್ತಿದ್ದು, ಇದು ಶಿಕ್ಷಕರ ಸೃಜನಶೀಲತೆ ಹಾಗೂ ಮಕ್ಕಳ ಕಲಿಕೆಗೆ ಹಿನ್ನಡೆ ಆಗಬಾರದೆಂಬ ಕಾರಣಕ್ಕೆ ತಾಲೂಕು ಶಿಕ್ಷಣ ಇಲಾಖೆ ಇದೀಗ ವಿನೂತನ ಕಾರ್ಯಕ್ರಮಕ್ಕೆ ಮುಂದಾಗಿದೆ.
ವಠಾರ ಶಾಲೆ ಎಂಬ ಕಲ್ಪನೆಯಡಿ ಮಕ್ಕಳ ಮನೆ ಬಾಗಿಲಿಗೆ ಶಿಕ್ಷಣ ತಲುಪಿಸುವ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಈ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಕನಕಗಿರಿ ತಾಲೂಕಿನ ಸುಳೇಕಲ್ ಗ್ರಾಮದಲ್ಲಿ ಈ ಕಾರ್ಯಕ್ರಮಕ್ಕೆ ಶಿಕ್ಷಣಾಧಿಕಾರಿ ಸೋಮಶೇಖರ್ ಗೌಡ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ಈ ಯೋಜನೆಯಡಿ ಇಂಗ್ಲಿಷ್, ಗಣಿತ ಮತ್ತು ವಿಜ್ಞಾನದಂತಹ ಕ್ಲಿಷ್ಟ ವಿಷಯಗಳ ಬಗ್ಗೆ ಹೆಚ್ಚಿನ ಆದ್ಯತೆ ಕೊಟ್ಟು ಮಕ್ಕಳ ಕಲಿಕೆಗೆ ಪ್ರೋತ್ಸಾಹ ನೀಡಲಾಗುವುದು. ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷ ಆರಂಭಕ್ಕೆ ಇನ್ನೂ ಒಂದೂವರೆಯಿಂದ ಎರಡು ತಿಂಗಳ ಹಿಡಿಯಬಹುದು ಎಂದರು.